ಕರ್ನಾಟಕ

ಯುಜಿಡಿ ಕಾಮಗಾರಿಗೆ ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ : ಕೆ.ಷಡಕ್ಷರಿ

ರಾಜ್ಯ(ಬೆಂಗಳೂರು)ಜೂ.20:- ಮೊದಲ ಹಂತದ ಒಳ ಚರಂಡಿ ಯೋಜನೆಗೆ ಸಂಬಂಧಿಸಿದಂತೆ ತಿಪಟೂರಿನ ಕಲ್ಲೇಗೌಡನಪಾಳ್ಯ ಸಮೀಪ ನಿರ್ಮಿಸಿರುವ ಶೌಚ ಸಂಸ್ಕರಣ ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ.

ಕಲ್ಲೇಗೌಡನಪಾಳ್ಯ ಸಮೀಪದ ಹೂವಿನಕಟ್ಟೆ ಬಳಿ ನಿರ್ಮಿಸಿರುವ ಶೌಚ ಸಂಸ್ಕರಣ ಘಟಕಕ್ಕೆ ಶಾಸಕ ಕೆ.ಷಡಕ್ಷರಿ ಭೇಟಿ ನೀಡಿ ಪರಿಶೀಲಿಸಿ ಘಟಕದ ಸಂಪೂರ್ಣ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಶೌಚ ಸಂಸ್ಕರಣ ಘಟಕ ನಿರ್ಮಾಣ ಸ್ಥಳ ವಿವಾದದಿಂದಾಗಿ ನೆನೆಗುದಿ ಬಿದ್ದಿತ್ತು. ಈ ಅವಧಿಯಲ್ಲಿ ಕಲ್ಲೇಗೌಡನಪಾಳ್ಯ ಸಮೀಪ ಸುಮಾರು 10 ಎಕರೆ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಘಟಕ ನಿರ್ಮಿಸಲಾಗಿದೆ ಎಂದರು. ಸುಮಾರು 21 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಅತ್ಯಾಧುನಿಕ ಮಾದರಿಯಲ್ಲಿ ಯಂತ್ರಗಳನ್ನು ಅಳವಡಿಸಿ ಯಾವುದೇ ತೊಂದರೆಯಾಗದಂತೆ ಘಟಕ ನಿರ್ಮಿಸಲಾಗಿದೆ. ವಿವಿಧೆಡೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‍ಟಿಪಿ ಘಟಕಗಳನ್ನು ವೀಕ್ಷಿಸಿದ ನಂತರ ಸೂಕ್ತ ಮಾದರಿಯಲ್ಲಿ ಘಟಕ ನಿರ್ಮಿಸಲಾಗಿದೆ. ಸಂಪೂರ್ಣ ಕಂಪ್ಯೂಟರೀಕೃತ ವ್ಯವಸ್ಥೆ ಮಾಡಲಾಗಿದೆ ಎಂದರು. ಕಾರ್ಯಾರಂಭಕ್ಕೆ ಸಿದ್ಧವಾಗಿರುವ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟಿಸಬೇಕೆಂಬ ಆಸೆ ಇದೆ  ದಸರೀಘಟ್ಟ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜತೆ  ಮುಖ್ಯಮಂತ್ರಿಗಳಿಂದ ಉದ್ಘಾಟಿಸಲಾಗುವುದು. ಅಷ್ಟರಲ್ಲಿ ಬಾಕಿ ಉಳಿದಿರುವ ಶೇ. 10 ರಷ್ಟು ಕೆಲಸ ಮತ್ತು ಒಳಚರಂಡಿ ಸಾಗಿರುವ ಮಾರ್ಗಗಳ ಎಲ್ಲಾ ಮನೆಗಳ ಶೌಚಾಲಯ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮನೆ ಸಂಪರ್ಕಕ್ಕೆ 6050 ರೂ. ನಿಗದಿಪಡಿಸಲಾಗಿದೆ. 1080 ರೂ. ವಾರ್ಷಿಕ ಕಂತಿನಲ್ಲಾದರೂ ಪಾವತಿಸಿ ಸಂಪರ್ಕ ಪಡೆಯಲೇಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗದವರ ಮನೆಗಳಿಗೆ ನಗರಸಭೆಯ ಮೀಸಲು ಹಣದಿಂದ ಸಂಪರ್ಕ ಕಲ್ಪಿಸಲಾಗುವುದು. ತ್ವರಿತವಾಗಿ ಸಂಪರ್ಕ ಕಾರ್ಯವನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡನೇ ಹಂತದ ಯುಜಿಡಿ ಕಾಮಗಾರಿಗೆ ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಈ ಕಾಮಗಾರಿ ಸಹ ಶೀಘ್ರದಲ್ಲಿ ಚಾಲನೆಗೊಳ್ಳಲಿದೆ ಎಂದರು.
ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಮೇವು ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾಲೂಕಿನಲ್ಲಿ ನಡೆದ ಮೂರು ಗೋಶಾಲೆಗಳಿಗೆ ಹುಲ್ಲು ಸರಬರಾಜಿನಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ. ಒಟ್ಟು 3 ಕೋಟಿ ರೂ. ವೆಚ್ಚದ ಹುಲ್ಲನ್ನು ಆಂಧ್ರದಿಂದ ತರಿಸಿ ರಾಸುಗಳಿಗೆ ಸಮರ್ಪಕವಾಗಿ ವಿತರಿಸಲಾಗಿದೆ. ಈ ಹಣವನ್ನು ಗುತ್ತಿಗೆದಾರರಿಗೆ ಇನ್ನೂ ಪಾವತಿಸಿಲ್ಲ. ಹಾಗಾಗಿ ದುರ್ಬಳಕೆ ಆಗಿರುವ ಮಾತೇ ಬರುವುದಿಲ್ಲ. ಅಂಥದ್ದಕ್ಕೆ ಆಸ್ಪದ ನೀಡಿಲ್ಲ ಎಂದರು. ನನಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಬಗ್ಗೆ ನಾನೂ ಕೂಡ ಮಾಧ್ಯಮಗಳ ಮೂಲಕ ಕೇಳಿ ತಿಳಿದಿದ್ದೇನೆ. ಅವಕಾಶ ಸಿಕ್ಕರೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಿದ್ಧನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಕಾಶ್, ಉಪಾಧ್ಯಕ್ಷೆ ಜಹೀರಾ ಜಬೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ಬಿ. ಶಶಿಧರ್, ನಗರಸಭೆ ಸದಸ್ಯರಾದ ನಾಗರಾಜು, ಅಬ್ದುಲ್ ಖಾದರ್ ಟಿ.ಜಿ., ಲಿಂಗರಾಜು, ಪೌರಾಯುಕ್ತರಾದ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: