ಕರ್ನಾಟಕ

ಅಪ್ಪಣೆ ಕೊಡುವ ಬಸವನೆಂದೇ ಪ್ರಸಿದ್ಧಿ ಪಡೆದಿದ್ದ ಶ್ರೀನಂದಿಬಸವೇಶ್ವರ ಸ್ವಾಮಿಯ ಪಟ್ಟದ ಬಸವ ಸಾವು

ರಾಜ್ಯ(ತುಮಕೂರು)ಜೂ.20:- ಹುಳಿಯಾರು  ಹೋಬಳಿಯ ನಂದಿಹಳ್ಳಿ ಗ್ರಾಮದಲ್ಲಿ 2 ದಶಕಗಳಿಂದ ಅಪ್ಪಣೆ ಕೊಡುವ ಬಸವನೆಂದೇ ಪ್ರಸಿದ್ಧಿ ಪಡೆದಿದ್ದ ಶ್ರೀನಂದಿಬಸವೇಶ್ವರ ಸ್ವಾಮಿಯ ಪಟ್ಟದ ಬಸವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಲ್ಲಿನ ಶ್ರೀನಂದಿಬಸವೇಶ್ವರ ಸ್ವಾಮಿಗೆ 30 ವರ್ಷಗಳ ಹಿಂದೆ ಬಸವನನ್ನು ಬಿಡಲಾಗಿತ್ತು.  ಸ್ವಾಮಿಯವರ ಜಾತ್ರೆ ಸೇರಿದಂತೆ ಊರಿನ ಯಾವುದೇ ಧಾರ್ಮಿಕ ಕೈಂಕರ್ಯಗಳನ್ನು ಈ ಬಸವನ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಇಪ್ಪತ್ತು ವರ್ಷಗಳ ಹಿಂದೆ ಅಪ್ಪಣೆ ಸಹ ಕೊಡುತ್ತಿದ್ದರಿಂದ ದೇವರ ಕಾರ್ಯಗಳಿಗೆ ಬಳಸದೆ ಬಸವನನ್ನೇ ದೇವರೆಂದು ಪೂಜಿಸುವ ಪರಿಪಾಠ ಬೆಳೆಯಿತು. ನಂದಿಹಳ್ಳಿ ಗ್ರಾಮದವರಲ್ಲದೆ ಅಕ್ಕಪಕ್ಕದ ಊರಿನ ಜನರು ಮನೆ ಕಟ್ಟುವ, ಜಮೀನು ಕೊಳ್ಳುವ, ಶುಭ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಬಸವನ ಅಪ್ಪಣೆ ಕೇಳುವ ವಾಡಿಕೆ ಬೆಳೆಸಿಕೊಂಡಿದ್ದರು. ಅಪ್ಪಣೆ ಕೇಳುವವರ ಕಾರ್ಯ ನೆರವೇರುವುದಾದರೆ ಬಲಗಾಲನ್ನು ಮುಂದಿಡುತ್ತಿತ್ತು. ಇಲ್ಲವಾದಲ್ಲಿ ಎಡಗಾಲನ್ನು ಮುಂದಿಡುವ ಮೂಲಕ ಅಪ್ಪಣೆ ಕೊಡುತ್ತಿತ್ತು. ಅಪ್ಪಣೆ ಪಡೆದವರು ಬಸವನ ಕೊಂಬಿಗೆ ಕಾಣಿಕೆ ಹಣ ಕಟ್ಟುತ್ತಿದ್ದರು. ಹಾಗಾಗಿ ಸುತ್ತಮುತ್ತಲ ಪ್ರೀತಿಯ ಬಸವನಾಗಿದ್ದು, ಅಕ್ಕಿ-ಬೆಲ್ಲ ಕೊಟ್ಟು ಗ್ರಾಮಸ್ಥರು ಪ್ರೀತಿಯಿಂದ ಸಾಕುತ್ತಿದ್ದರು.
ಈ ಬಸವನ ಪ್ರಖ್ಯಾತಿ ಸುತ್ತಮುತ್ತಲ ಹಳ್ಳಿಗಳ ದೇವಸ್ಥಾನ ಪ್ರಾರಂಭೋತ್ಸವ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಗಳಿಗೆ ಕರೆಸಿಕೊಂಡು ಮೊದಲು ಬಸವನಿಗೆ ಅಕ್ಕಿಬೆಲ್ಲ ಕೊಟ್ಟು ಚಾಲನೆ ನೀಡುತ್ತಿದ್ದರು. ಆದರೆ, ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಬಸವ  ನಂದಿಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂದೆಯೇ ಕೊನೆಯುಸಿರೆಳೆಯಿತು.
ಮೊದಲೇ ಗ್ರಾಮದ ಪ್ರೀತಿಯ ಬಸವನಾದ್ದರಿಂದ ತರಹೇವಾರಿ ಪುಷ್ಪಗಳಿಂದ ಅಲಂಕಾರಗೊಂಡ ವಾದ್ಯದೊಂದಿಗೆ ಮೃತ ಬಸವನ ಮೆರವಣಿಗೆಯನ್ನು ನಂದಿಹಳ್ಳಿ ಗ್ರಾಮದಲ್ಲಿ ಮಾಡಿ ನಂತರ ಗಂಗಮ್ಮನ ಬಾವಿ ಬಳಿ ಕರೆದೊಯ್ದು ಶ್ರದ್ಧಾ ಭಕ್ತಿಯಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ವೃದ್ಧರು, ಮಕ್ಕಳು, ಮಹಿಳೆಯರೆನ್ನದೆ ಇಡೀ ಊರಿಗೆ ಊರೇ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: