ದೇಶಪ್ರಮುಖ ಸುದ್ದಿವಿದೇಶ

ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ವೀಸಾ ಅವಧಿ ವಿಸ್ತರಣೆ

ನವದೆಹಲಿ, ಜೂ.20 : ಬಾಂಗ್ಲಾದೇಶದಿಂದ ಗಡಿಪಾರು ಶಿಕ್ಷೆಗೀಡಾಗಿ ಭಾರತದಲ್ಲಿ ನೆಲೆಸಿರುವ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರ ವೀಸಾ ಅವಧಿಯನ್ನು ಕೇಂದ್ರ ಗೃಹ ಸಚಿವಾಲಯ ಒಂದು ವರ್ಷದವರೆಗೆ ವಿಸ್ತರಿಸಿದೆ.

ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ವೀಸಾ ಅವಧಿ ವಿಸ್ತರಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗೃಹ ಕಚೇರಿ ಮೂಲಗಳು ತಿಳಿಸಿವೆ. ತಸ್ಲಿಮಾ ಅವರು ಸ್ವೀಡನ್ ನಾಗರಿಕತ್ವವನ್ನೂ ಪಡೆದಿದ್ದಾರಾದರೂ, 2004ರಿಂದಲೂ ಅವರು ಭಾರತದಲ್ಲೇ ನೆಲೆಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಕೂಡ ಕೇಂದ್ರ ಗೃಹ ಸಚಿವಾಲಯವು ಸ್ವೀಡಿಶ್ ಪಾಸ್‍ಪೋರ್ಟ್ ಆಧಾರದ ಮೇಲೆಯೇ ಒಂದು ವರ್ಷದವರೆಗೆ ಭಾರತದಲ್ಲಿ ಉಳಿಯಲು ಅವಕಾಶ ವಿಸ್ತರಿಸಿದೆ ಎಂದು ತಿಳಿದುಬಂದಿದೆ. ತಸ್ಲೀಮಾ ಅವರು ಅಮೆರಿಕ ಹಾಗೂ ಯುರೋಪಿನಲ್ಲಿ ಎರಡು ದಶಕಗಳ ಕಾಲ ಉಳಿದುಕೊಂಡಿದ್ದರು. ನಂತರ ಕೋಲ್ಕತಾದಲ್ಲಿ ಶಾಶ್ವತವಾಗಿ ನೆಲೆಸುವ ಇಂಗಿತ ವ್ಯಕ್ತಪಡಿಸಿದ್ದ ತಸ್ಲೀಮಾ, ಈ ಬಗ್ಗೆ ಮನವಿ ಸಲ್ಲಿಸಿದ್ದರು. ಆದರೆ ಗೃಹ ಸಚಿವಾಲಯವು ತಸ್ಲಿಮಾ ಅವರು ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಬಗ್ಗೆ ಸಲ್ಲಿರುವ ಅರ್ಜಿಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

-ಎನ್.ಬಿ.

Leave a Reply

comments

Related Articles

error: