ಕರ್ನಾಟಕಪ್ರಮುಖ ಸುದ್ದಿ

ವಿವಿಧ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ

ರಾಜ್ಯ(ತುಮಕೂರು)ಜೂ.20:-  ಕುಣಿಗಲ್ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ದಿಢೀರ್ ಭೇಟಿ ನೀಡಿ ಭೂ ದಾಖಲಾತಿಗಳು ಸೇರಿದಂತೆ ವಿವಿಧ ಕಡತಗಳನ್ನು ಪರಿಶೀಲಿಸಿ ಶೀಘ್ರವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ಭೂ ದಾಖಲಾತಿಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕೃತಿ ಕೇಂದ್ರದ ಮುಂದೆ ರೈತರು ನಿಂತಿರುವುದನ್ನು ಗಮನಿಸಿ ಒಳಹೋದ ಜಿಲ್ಲಾಧಿಕಾರಿಗಳು ರೈತರಿಂದ ಬರುವ ಅರ್ಜಿಗಳನ್ನು ಆದಷ್ಟು ಬೇಗ ಪಡೆದು ಅವರಿಗೆ ವೃತಾ ತಿರುಗಾಡಿಸದೇ ಶೀಘ್ರವಾಗಿ ರೈತರುಗಳ ಕೆಲಸ ಮಾಡಿಕೊಡುವ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಚಿಸಿದರು. ನಂತರ ದರಕಾಸು ಸೇರಿದಂತೆ  ಆರ್.ಟಿ.ಸಿ. ಕೈ ಬಿಟ್ಟ ಪ್ರಕರಣಗಳು, 94ಸಿ ಪ್ರಕರಣಗಳು, ತಿದ್ದುಪಡಿ ಪ್ರಕರಣಗಳನ್ನು  ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆ ನೀಡಿದ ಮಾರ್ಗದರ್ಶನದಂತೆ  ಕಡತಗಳನ್ನು ಕಾನೂನು ರೀತಿಯಲ್ಲಿ ನಿರ್ವಹಿಸುವಂತೆ ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚಿಸಿದರು.
ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀಡುತ್ತಿರುವ ಆಧಾರ್‍ಕಾರ್ಡ್ ವಿತರಣೆಯಲ್ಲಿ ತುಮಕೂರು ಜಿಲ್ಲೆಯೇ ಮೊದಲ ಸ್ಥಾನದಲ್ಲಿರುವುದರಿಂದ ಹಲವರು ಜಿಲ್ಲೆಗೆ ಬಂದು ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ನೀಡುವ ಕ್ರಮದಲ್ಲಿ ಯಾವುದೇ ತೊಂದರೆ ಇಲ್ಲ.   ರೈತರಿಗೆ ನೀಡುತ್ತಿರುವ ಬೆಳೆ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದ್ದು, ರೈತರು ಆತಂಕಪಡುವ ಅಗತ್ಯ ಇಲ್ಲ ಎಂದರು. ಖಾಲಿ ಇರುವ ಸರ್ಕಾರದ  ಭೂಮಿಯನ್ನು ಅಗತ್ಯ ಕ್ರಮಗಳಿಗೆ ಉಪಯೋಗಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗವು ಯಾವುದೇ ಸ್ವಾರ್ಥ ವ್ಯಕ್ತಿಗಳ ಕೈಗೆ ಹೋಗಬಾರದು. ಸಾರ್ವಜನಿಕರಿಗೆ ಅಗತ್ಯ ಇರುವ ಸ್ಮಶಾನಕ್ಕೆ ಆದ್ಯತೆಯ ಮೇರೆಗೆ ಜಾಗ ನೀಡುವುದು. ಸರ್ವೆ ನಂ. 90 ಕಸಬಾ 3.6 ಗುಂಟೆ ಜಮೀನನ್ನು ಸಮರ್ಪಕವಾಗಿ ಸರ್ಕಾರದ ಅಧೀನದಲ್ಲಿಟ್ಟುಕೊಂಡು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ಪಟ್ಟಣದ ವೀರಶೈವ ಸಂಘದವರು ಮತ್ತು ಎಡೆಯೂರು ಗೊಟ್ಟಿಕೆರೆ ಗ್ರಾಮದ  ಮಾರುತಿ ಸೇವಾ ಸಮಿತಿಯವರು, ತಮ್ಮ ಅನುಭೋಗದಲ್ಲಿರುವ ಜಮೀನಿಗೆ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಕೊಡುವಂತೆ ಮನವಿ ನೀಡಿದ್ದು, ಆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.  ಅಲ್ಲದೆ ಪಹಣಿ ಹಾಗೂ ಜಾತಿ ವರಮಾನದ ದೃಢೀಕರಣ ಪತ್ರಗಳನ್ನು ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದರ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪ್ರಿಂಟಿಂಗ್ ಟೋನರ್‍ಗಾಗಿ ಇಂಡೆಂಟ್ ಹಾಕಲಾಗಿದ್ದು, ಶೀಘ್ರವಾಗಿ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ನಾಗರಾಜು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: