ಕರ್ನಾಟಕಪ್ರಮುಖ ಸುದ್ದಿ

ಜು.1ರಂದು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿರುವ ಸಿದ್ದರಾಮಯ್ಯ

ರಾಜ್ಯ(ತುಮಕೂರು)ಜೂ.20:-  ಜುಲೈ 1 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಎನ್.ರಾಜಣ್ಣ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ಮಧುಗಿರಿ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತುಗಳನ್ನು ವಿತರಿಸಲಿರುವ ಬಗ್ಗೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಧುಗಿರಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯ, ಅಂಬೇಡ್ಕರ್ ಸಮುದಾಯ ಭವನ, ತಲಾ 12ಲಕ್ಷ ರೂ. ವೆಚ್ಚದ 22 ಅಂಬೇಡ್ಕರ್ ಭವನಗಳು, 10 ಲಕ್ಷ ರೂ.ವೆಚ್ಚದ 20 ಅಂಬೇಡ್ಕರ್ ಭವನಗಳು ಸೇರಿದಂತೆ ಸುಮಾರು 13.33 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲು ಸಿದ್ಧವಿರುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ದೇವರಾಜ್ ಅವರು ಶಾಸಕರಿಗೆ ಮಾಹಿತಿ ನೀಡಿದರು. ಪರಿಶಿಷ್ಟ ವರ್ಗದ ಇಲಾಖೆ ವತಿಯಿಂದ ಸಮುದಾಯ ಭವನಗಳು, ಕಿತ್ತೂರುರಾಣಿ ಚೆನ್ನಮ್ಮ ವಸತಿ ನಿಲಯ, ಅಲ್ಪಸಂಖ್ಯಾತರ ಇಲಾಖೆ ವತಿಯಿಂದ 80 ಲಕ್ಷ ರೂ. ವೆಚ್ಚದ ವಸತಿ ನಿಲಯ, ಶಾದಿ ಮಹಲ್, ಪಶುಸಂಗೋಪನೆ ಇಲಾಖೆ ವತಿಯಿಂದ ಶಾವನಹಳ್ಳಿ, ಕಾರ್ಪಳ್ಳಿ ಸೇರಿದಂತೆ ತಾಲೂಕಿನ ವಿವಿಧೆಡೆ 7 ಕಟ್ಟಡಗಳನ್ನು ಉದ್ಘಾಟಿಸಲು ಸಿದ್ದತೆ ಮಾಡಿಕೊಂಡಿರುವುದಾಗಿ ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ರಾಜಶೇಖರ್ ಸಭೆಗೆ ಮಾಹಿತಿ ನೀಡಿದರು.

ಮಧುಗಿರಿ ತಾಲೂಕಿನ ವಡೇರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಸ್ಆರ್‌ಟಿಸಿ. ಡಿಪೋವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಹಾಗೂ 10 ಅಂಗನವಾಡಿ ಕಟ್ಟಡಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ ಎಂದರು. ಮಧುಗಿರಿ ತಾಲೂಕಿನ ಕೊಡಿಗೇಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ಕಟ್ಟಡ ಉದ್ಘಾಟನೆ, ತುಮಕೂರು ಹಾಲು ಒಕ್ಕೂಟದ ಚಿಲ್ಲಿಂಗ್ ಸೆಂಟರ್, ಇಮ್ಮಡಿಗೊಂಡನಹಳ್ಳಿ, ವೀರಾಪುರ ಸೇರಿದಂತೆ 5 ಬ್ಯಾರೇಜ್, ಚೆಕ್ ಡ್ಯಾಂ ಉದ್ಘಾಟನೆ ಮತ್ತು 6 ಚೆಕ್ ಡ್ಯಾಂ, ಬ್ಯಾರೇಜ್‍ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಧುಗಿರಿ ತಾಲೂಕಿನಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಶೇ. 100ರಷ್ಟು ನಿರಂತರ ವಿದ್ಯುತ್ ಸಂಪರ್ಕವನ್ನು ತಾಲೂಕಿನಾದ್ಯಂತ ನೀಡಿರುವ ಹಿನ್ನೆಲೆಯಲ್ಲಿ ಅಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಿಸುವುದಾಗಿ ಶಾಸಕರು ತಿಳಿಸಿದರು. ಕಾಳೇನಳ್ಳಿ, ಸಂಕಾಪುರ ರಸ್ತೆ ಸೇರಿದಂತೆ 11 ಕೋಟಿ ರೂ. ವೆಚ್ಚದಲ್ಲಿ 3 ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಇದೇ ಸಂದರ್ಭದಲ್ಲಿ ಸದರಿ ರಸ್ತೆಗಳನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದು, ದೊಡ್ಡಯಲ್ಕೂರು, ತಿಪ್ಪಾಪುರ ರಸ್ತೆ ಸೇರಿದಂತೆ ತಾಲ್ಲೂಕಿನ ವಿವಿಧ 10 ರಸ್ತೆಗಳನ್ನು 23 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿದ್ದು, ಈ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಯೋಜನೆಗಳಡಿ ವಿವಿಧ ಸವಲತ್ತುಗಳನ್ನು ವಿತರಿಸುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಂಬಂಧ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶಾಸಕರು ಸುದೀರ್ಘವಾಗಿ ಚರ್ಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದಿವ್ಯಾ ವಿ.ಗೋಪಿನಾಥ್, ಅಪರ ಜಿಲ್ಲಾಧಿಕಾರಿ ಸಿ. ಅನಿತಾ, ಮಧುಗಿರಿ ಉಪವಿಭಾಗಾಧಿಕಾರಿ ಡಾ. ವೆಂಕಟೇಶಯ್ಯ, ಉಪವಿಭಾಗಾಧಿಕಾರಿ ತಬಸ್ಸುಮ್ ಜಹೇರಾ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: