ದೇಶಪ್ರಮುಖ ಸುದ್ದಿ

ಲಾಲು ಕುಟುಂಬದ 180 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಲು ಐಟಿ ನೋಟಿಸ್

ನವದೆಹಲಿ, ಜೂ.20 : ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ಹಾಗೂ ಮಕ್ಕಳಿಗೆ ಸೇರಿದ 12 ಫ್ಲ್ಯಾಟ್‍ಗಳು ಸೇರಿದಂತೆ ಒಟ್ಟು 9 ಕೋಟಿ ರುಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

ಒಂದು ಸಾವಿರ ಕೋಟಿ ರುಪಾಯಿ ಮೌಲ್ಯದ ಬೇನಾಮಿ ಆಸ್ತಿ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್, ಲಾಲು ಪತ್ನಿ ರಾಬ್ರಿ ದೇವಿ ಮತ್ತು ಪುತ್ರಿ ಮೀಸಾ ಭಾರತಿ ಅವರುಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯು 9 ಕೋಟಿ ರೂ ಬೇನಾಮಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಲುವಾಗಿ ಮಂಗಳವಾರ ಆಟ್ಯಾಚ್ಮೆಂಟ್ ನೋಟಿಸ್ ಜಾರಿ ಮಾಡಿದೆ.

ಲಾಲು ಪುತ್ರಿ ಮೀಸಾ ಭಾರತಿ ಮತ್ತು ಆಕೆಯ ಪತಿ ಶೈಲೇಶ್ ಕುಮಾರ್, ತೇಜಸ್ವಿ ಯಾದವ್, ರಾಬ್ರಿ ದೇವಿ ಮತ್ತು ಸಹೋದರಿಯರಾದ ರಾಗಿಣಿ ಮತ್ತು ಚಂದಾ ಯಾದವ್ ಅವರುಗಳಿಗೆ ಸೇರಿದ ದೆಹಲಿ ಮತ್ತು ಪಾಟ್ನಾದಲ್ಲಿರುವ 12 ನಿವೇಶನಗಳು, ಕಟ್ಟಡಗಳು ಹಾಗೂ ಭೂಮಿ ಸೇರಿದಂತೆ ಒಟ್ಟು 9.32 ಕೋಟಿ ರುಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ.

ತೆರಿಗೆ ಅಧಿಕಾರಿಗಳ ಅಂದಾಜಿನ ಪ್ರಕಾರ ಈ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 170 ರಿಂದ 180 ಕೋಟಿ. ಕಳೆದ ಮೇ 16ರಂದು ಐಟಿ ಇಲಾಖೆಯು ಲಾಲು ಮತ್ತು ಅವರ ಮಕ್ಕಳಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಮತ್ತು ಮಗಳು ಮೀಸಾ ಭಾರತಿ ಅವರು ಶಾಮೀಲಾಗಿರುವ ಬೇನಾಮಿ ಭೂ ವ್ಯವಹಾರಗಳಿಗೆ ಸಂಬಂಧಿಸಿದಂತೆ ದೆಹಲಿ ಮತ್ತು ಸುತ್ತಮುತ್ತಲಿನ 22 ಕಡೆ ದಾಳಿ ನಡೆಸಿತ್ತು.

-ಎನ್.ಬಿ.

Leave a Reply

comments

Related Articles

error: