ಕರ್ನಾಟಕಪ್ರಮುಖ ಸುದ್ದಿ

ಸಂಚಾರ ಸುವ್ಯವಸ್ಥೆಗೆ ಹಲವಾರು ದಿಟ್ಟಕ್ರಮ ಕೈಗೊಂಡ ವೃತ್ತ ನಿರೀಕ್ಷಕ ಎಸ್.ಲಕ್ಷ್ಮಣ ನಾಯಕ್

ರಾಜ್ಯ(ಹರಿಹರ)ಜೂ.20:-  ವೃತ್ತ ನಿರೀಕ್ಷಕರಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿರುವ ಎಸ್.ಲಕ್ಷ್ಮಣ ನಾಯಕ್ ನಗರದ ಸಂಚಾರ ಸುವ್ಯವಸ್ಥೆಗೆ ಹಲವಾರು ದಿಟ್ಟಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.ನಗರದ ವಿವಿಧ ರಸ್ತೆಗಳಲ್ಲಿ ಸಿಬ್ಬಂದಿಗಳೊಂದಿಗೆ ಸಂಚರಿಸಿದ ಲಕ್ಷ್ಮಣ್ ನಾಯಕ್ ಫುಟ್‍ಪಾತ್ ವ್ಯಾಪಾರಿಗಳನ್ನು ಪಾದಾಚಾರಿಗಳಿಗೆ ಜಾಗ ಬಿಟ್ಟು ಹಿಂದಕ್ಕೆ ಸರಿದು ವಹಿವಾಟು ನಡೆಸಲು ತಿಳಿಸಿದರು.

ಯಾವುದೇ ಕಾರಣದಿಂದ ಸಂಚಾರಕ್ಕೆ ಅಡ್ಡಿಯಾಗುವಂತೆ ವ್ಯಾಪಾರ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಫುಟ್‍ಪಾತ್ ವ್ಯಾಪರಿಗಳಿಗೆ ತಾಕೀತು ಮಾಡಿದರು. ಹಳೇ ಪಿಬಿ ರಸ್ತೆ, ಮುಖ್ಯ ರಸ್ತೆ ಮುಂದಿನ ರಸ್ತೆಗಳ ಎರಡೂ ಬದಿಯಲ್ಲಿ ರಸ್ತೆ ಅಕ್ರಮಿಸಿ ಫುಟ್‍ಪಾತ್ ವ್ಯಾಪಾರಿಗಳು ಹಾಕಿಕೊಂಡಿದ್ದ ಟೆಂಟ್‍ಗಳನ್ನು ತೆರವುಗೊಳಿಸಿದರು, ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲಿ ಸಂಚರಿಸುವ ಜನ-ವಾಹನಕ್ಕೆ ತೊಂದರೆಯಾಗದಂತೆ ಆಯಾ ಅಂಗಡಿಗಳ ಮುಂದೆ ನಿಲ್ಲಿಸಿಕೊಳ್ಳಲು ಹಾಗೂ ಬೇಕಾ ಬಿಟ್ಟಿ ದ್ವಿಚಕ್ರ ವಾಹನ ನಿಲ್ಲದಂತೆ ನೋಡಿಕೊಳ್ಳಲು ಅಂಗಡಿ ಮಾಲೀಕರಿಗೆ ತಿಳಿಸಿದರು. ರೈಲ್ವೆನಿಲ್ದಾಣ ರಸ್ತೆಯ ಅಕ್ಕಪಕ್ಕ ಹಾಕಿಕೊಂಡಿದ್ದ ತಳ್ಳುಗಾಡಿಗಳನ್ನು ಅಲ್ಲದೆ ರಸ್ತೆಬದಿಯಲ್ಲಿ ಮೀನು ಸುರುವಿಕೊಂಡು ಮಾರುತ್ತಿದ್ದವರನ್ನು ಪಕ್ಕದ ಭಾರತ್ ಆಯಿಲ್‍ ಮಿಲ್ ಕಾಂಪೌಂಡ್‍ನ ಕನ್ಸರ್‍ವೆನ್ಸಿ ರಸ್ತೆಗಳಿಗೆ ಸ್ಥಳಾಂತರಿಸಿದರು. ಮತ್ತೆ ರಸ್ತೆಗೆ ಬಂದು ವ್ಯಾಪಾರ ನಡೆಸದಂತೆ ಅವರಿಗೆಲ್ಲಾ ತಾಕೀತು ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ನಾಯಕ್, ನಗರದಲ್ಲಿ ಸಂಚಾರ ವ್ಯವಸ್ಥೆ ತುಂಬಾ ಹದಗೆಟ್ಟು ಹೋಗಿದೆ. ಸುಗಮ ಸಂಚಾರಕ್ಕೆ ಅಗತ್ಯ ಸುಧಾರಣೆ ತರಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದು ಕೋರಿದರು.ನಗರದ ರಸ್ತೆಗಳಿಗೆ ಫುಟ್‍ಪಾತ್ ಇಲ್ಲ, ರಸ್ತೆಗಳ ಎರಡೂ ಬದಿ ಫುಟ್ ಪಾತ್ ಅಂಗಡಿಗಳು ಚಾಚಿಕೊಂಡಿರುವುದರಿಂದ ಜನರು ರಸ್ತೆಯಲ್ಲಿ ಜೀವ ಕೈಯ್ಯಲ್ಲಿ ಹಿಡಿದು ನಡೆದಾಡಬೇಕಾಗಿದೆ. ಫುಟ್‍ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಸಿ, ಪರ್ಯಾಯವ ವ್ಯವಸ್ಥೆ ಮಾಡಬೇಕಾಗಿದ್ದು, ನಗರಸಭೆಯವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಬಹುತೇಕ ಬಡವರೆ ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡುತ್ತಿದ್ದು, ಸದ್ಯಕ್ಕೆ ಅವರ ವ್ಯಾಪಾರವೂ ನಡೆಯಬೇಕು, ಸಂಚಾರಕ್ಕೂ ತೊಂದರೆಯಾಗಬಾರದು ಎಂದು ಅವರನ್ನು ಸ್ವಲ್ಪ ಹಿಂದೆ ಸರಿಸಲಾಗಿದೆ ಎಂದರು.ನಗರದ ಆಟೋಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ, ನಡು ರಸ್ತೆಯಲ್ಲೇ ಅಡ್ಡಾದಿಡ್ಡಿ ಓಡಾಡುತ್ತಾ ಪ್ರಯಾಣ ಕರನ್ನು ಸೆಳೆಯುವ ಆಟೋಗಳಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಆಟೋ ಚಾಲಕ-ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದು, ಆಯಾ ನಿಗದಿತ ನಿಲ್ದಾಣಗಳಲ್ಲೇ ಆಟೋ ನಿಲ್ಲಿಸಿಕೊಂಡು ಪ್ರಯಾಣ ಕರನ್ನು ಹತ್ತಿಸಿಕೊಳ್ಳಬೇಕು.
ಒಂದು ವೇಳೆ ಪ್ರಯಾಣಿಕರು ಅಂಗವಿಕಲರಾಗಿದ್ದರೆ ಮಾತ್ರ ಅಂತವರನ್ನು ಹತ್ತಿಸಿಕೊಳ್ಳಲು, ಇಳಿಸಲು ನಿರ್ಬಂಧಿಸುವುದಿಲ್ಲ. ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ವಿಮೆ, ಚಾಲನಾ ಪರವಾನಿಗೆ ಮುಂತಾದವುಗಳನ್ನು ನಿಯಮಾನುಸಾರ ಹೊಂದಿರಬೇಕೆಂದು ತಿಳಿಸಲಾಗಿದೆ ಎಂದರು. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ನೂರಾರು ಸಾರ್ವಜನಿಕರು ಸಂಚಾರ ವ್ಯವಸ್ಥೆ ಸುಧಾರಿಸುವಂತೆ ಕೋರಿದ್ದಾರೆ, ರೈಲ್ವೆ ನಿಲ್ದಾಣದ ಎದುರು ಹಾಗೂ ಎದುರಿನ ರಸ್ತೆಗಳಲ್ಲಿ ಮೀನು, ಮೊಟ್ಟೆ ವ್ಯಾಪಾರ ನಡೆಸುವುದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಾಗುವಂತಾಗಿದೆ. ಆದ್ದರಿಂದ ಇವರ ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳ ನಿಗದಿಸಿ ಸ್ಥಳಾಂತರಿಸಲು ಇಲಾಖೆ ಪ್ರಯತ್ನಿಸುತ್ತಿದೆ ಎಂದರು. ಜಿಬಿಎಂಎಸ್ ಶಾಲಾ ಆವರಣದಲ್ಲಿ ನಿಲ್ಲಿಸುವ ಆಪೆ ಆಟೋ, ಮ್ಯಾಕ್ಸಿಕ್ಯಾಬ್ ಮುಂತಾದ ಖಾಸಗೀ ವಾಹನಗಳನ್ನು ಬಸ್ ನಿಲ್ದಾಣ ಪಕ್ಕದ, ಈಜು ಕೊಳದ ಬದಿಯ ಖಾಲಿ ಜಾಗದಲ್ಲಿ ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: