ಕರ್ನಾಟಕಪ್ರಮುಖ ಸುದ್ದಿಮೈಸೂರು

ಕರ್ನಾಟದಲ್ಲಿ ನಾನು ಸಿಎಂ ಆದರೆ ಕಾವೇರಿ ಸಮಸ್ಯೆ ಪರಿಹರಿಸುವೆ : ದೆಹಲಿಯಲ್ಲಿ ಯಡಿಯೂರಪ್ಪ!

ನವದೆಹಲಿ, ಜೂ.20 : ಕರ್ನಾಟಕದಲ್ಲಿ ಬಿಜೆಪಿ ಗೆದ್ದು ನಾನು ಮುಖ್ಯಮಂತ್ರಿಯಾದರೆ ಪ್ರಧಾನಿ ಮೋದಿಯವರ ಸಹಕಾರ ಪಡೆದು ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಯಡಿಯೂರಪ್ಪ ಅವರು, ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಕಗ್ಗಂಟಾಗಿ ಉಳಿದಿರುವ ಕಾವೇರಿ ಜಲ ವಿವಾದಕ್ಕೆ ಶಾಶ್ವತ ಪರಿಹಾರ ಒದಗಿಸುವುದಾಗಿ ಹೇಳಿಕೊಂಡಿದ್ದಾರೆ.

ಪ್ರತಿ ಬಾರಿ ಚುನಾವಣೆ ಹತ್ತಿರ ಬಂದಾಗ ಇದೇ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ. ಬರಗಾಲದಲ್ಲಿ ಕುಡಿಯುವ ನೀರಿನ ಕೊರತೆ ಎದುರಾದಾಗ ಹಾಗೂ ರೈತರಿಗೆ ನೀರಿನ ಕೊರತೆಯಾದ ಸಂದರ್ಭ ಕಾವೇರಿ ವಿವಾದ ಭುಗಿಲೇಳುತ್ತದೆ. ಈ ವಿಚಾರ ಎರಡೂ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಇದೀಗ ಯಡಿಯೂರಪ್ಪ ಅವರು ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಹೇಳಿಕೊಂಡಿದ್ದಾರೆ.

ಕರ್ನಾಟಕ ಬಿಜೆಪಿಯೊಳಗೆ ಆಂತರಿಕ ಭಿನ್ನಮತ ಹೆಚ್ಚುವ ಮೊದಲೇ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ತದನಂತರ ಯಡಿಯೂರಪ್ಪ ಅವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು,  ದಲಿತರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ದಲಿತರ ಕಾಲೋನಿಗಳಿಗೆ ಭೇಟಿ ನೀಡಿ, ಅವರ ಮನೆಗಳಲ್ಲಿ ಊಟ-ತಿಂಡಿ ಮಾಡುತ್ತಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಹೊರತುಪಡಿಸಿ ಎಲ್ಲ ಸಮುದಾಯಗಳ ಬೆಂಬಲ ಪಡೆಯುವುದು ಇದರ ಹಿಂದಿರುವ ಉದ್ದೇಶ ಎನ್ನಲಾಗುತ್ತಿದೆ.

ಪರಿಹಾರ ಸುಲಭವೇ?

ಸದ್ಯಕ್ಕೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೊಬ್ಬರು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿಷಯದ ಬಗ್ಗೆ ಹೇಳಿಕೆ ನೀಡಿರುವುದು ಚುನಾವಣಾ ಕಾರಣಕ್ಕಾಗಿ ಎಂದೇ ಪರಿಗಣಿಸಬಹುದೇನೋ. ಏಕೆಂದರೆ ಬಿಜೆಪಿ ಈ ವಿಚಾವನ್ನು ತನ್ನ ಚುನಾವಣಾ ಪ್ರನಾಳಿಕೆಯಲ್ಲಿ ಸೇರಿಸದ ಹೊರತು ಬಾಯಿ ಮಾತಿನ ಭರವಸೆಯನ್ನು ಎಷ್ಟರ ಮಟ್ಟಿಗೆ ನಂಬುವುದೋ ತಿಳಿಯದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಾವೇರಿ ವಿಷಯದಲ್ಲಿ ತಮಿಳುನಾಡಿನ ದ್ರಾವಿಡ ಪಕ್ಷಗಳು ಅಷ್ಟು ಸುಲಭದಲ್ಲಿ ರಾಜಿಗೆ ಒಪ್ಪುವ ಸಾಧ್ಯತೆ ಇಲ್ಲ. ಹೀಗಾಗಿ ಕರ್ನಾಟಕದ ಕಾವೇರಿ ಕಣಿವೆಯ ನೀರಿನ ಸಮಸ್ಯೆ ಬಗ್ಗೆ ಇದುವರೆಗೆ ಯಾವುದೇ ರಾಷ್ಟ್ರೀಯ ಪಕ್ಷಗಳ ನಾಯಕರು ಇಂತಹ ಹೇಳಿಕೆ ನೀಡಿಲ್ಲ.

ಕಾಂಗ್ರೆಸ್‍ ಪಕ್ಷದ ನಾಯಕರು ದಶಕಗಳಿಂದ ಈ ವಿಚಾರದಲ್ಲಿ ಮಾತಿಗಿಂತ ಮೌನವೇ ಆಭರಣ ಎಂಬ ನಿಲುವು ತಳೆದಿದ್ದಾರೆ. ಹೀಗಿರುವಾಗ ಯಡಿಯೂರಪ್ಪ ಅವರ ಹೇಳಿಕೆಯನ್ನು ಚುನಾವಣಾ ಹೇಳಿಕೆ ಎಂದು ಪರಿಗಣಿಸಬೇಕೆ ಅಥವಾ ನಿಜವಾಗಿ ಬಿಜೆಪಿ ಕೇಂದ್ರ ನಾಯಕರು ಕರ್ನಾಟಕದ ಕಾವೇರಿ ಕಣಿವೆಯ ಸಮಸ್ಯೆಗಳಿಗೆ ಸ್ಪಂದಿಸುವ ನಿರ್ಧಾರ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಭವಿಷ್ಯದಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.

-ಎನ್.ಬಿ.ಎನ್.

Leave a Reply

comments

Related Articles

error: