ಪ್ರಮುಖ ಸುದ್ದಿವಿದೇಶ

ಕೊಲಂಬಿಯಾ ಅಧ್ಯಕ್ಷ ಉವಾನ್‌ ಮಾನುವೆಲ್‌ ಸ್ಯಾಂಟೊಸ್ ಅವರಿಗೆ ಒಲಿದ ನೊಬೆಲ್ ಶಾಂತಿ ಪುರಸ್ಕಾರ

ಓಸ್ಲೊ: ಕೊಲಂಬಿಯಾದ ಅಧ್ಯಕ್ಷ ಉವಾನ್‌ ಮಾನುವೆಲ್‌ ಸ್ಯಾಂಟೊಸ್ ಅವರನ್ನು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಐದು ದಶಕಗಳ ಆಂತರಿಕ ಯುದ್ಧಕ್ಕೆ ಪರಿಹಾರ ಕಾಣಿಸಲು ಶ್ರಮವಹಿಸಿದ ಕಾರಣ ಸ್ಯಾಂಟೋಸ್‌ ಅವರನ್ನು ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಸರ್ಕಾರ ಮತ್ತು ಬಂಡುಕೋರರ ನಡುವೆ ಕಳೆದ 52 ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷದ ನಡುವೆ ಕಳೆದ ಆಗಸ್ಟ್ ತಿಂಗಳಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಕದನ ವಿರಾಮ ಘೋಷಣೆ ಆಗುವಲ್ಲಿ ಸ್ಯಾಂಟೊಸ್‌ ಅವರ ಪಾತ್ರ ಹೆಚ್ಚು. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಅಕ್ಟೋಬರ್‌ 2 ರಂದು ಜನಮತಗಣನೆ ನಡೆಸಿದಾಗ ಕೊಲಂಬಿಯಾ ಪ್ರಜೆಗಳು ಕದನ ವಿರಾಮದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕದನ ವಿರಾಮ ಕೊನೆಗೊಳ್ಳಲಿದೆ. ಆದರೂ ಸ್ಯಾಂಟೊಸ್ ಅವರ ಶಾಂತಿ ಸ್ಥಾಪನಾ ಪ್ರಯತ್ನವನ್ನು ಪ್ರಶಂಸಿಸಿರುವ ನೊಬೆಲ್‌ ಆಯ್ಕೆ ಸಮಿತಿಯು, ಸ್ಯಾಂಟೋಸ್ ಅವರ ಪ್ರಯತ್ನ ಇತರರಿಗೂ ಮಾದರಿ. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ, ಸ್ಯಾಂಟೋಸ್ ಅವರು ಪ್ರಶಸ್ತಿಯಿಂದ ನನ್ನ ಉತ್ಸಾಹ ಇಮ್ಮಡಿಯಾಗಿದೆ. ನಮ್ಮ ಶಾಂತಿ ಸ್ಥಾಪನೆಯ ಅಂತಿಮ ಪ್ರಯತ್ನಗಳು ಘಟ್ಟದಲ್ಲಿದ್ದು, ಸದ್ಯದಲ್ಲೇ ಆಂತರಿಕ ಸಂಘರ್ಷ ಕೊನೆಗಾಣಲಿದೆ ಎಂದಿದ್ದಾರೆ.

ಏನಿದು ಸಂಘರ್ಷ?

1964ರಲ್ಲಿ ಕೊಲಂಬಿಯಾದ ಮೂಲಭೂತವಾದಿ ಮತ್ತು ಮಾರ್ಕ್ಸ್`ವಾದಿ ರಾಜಕೀಯ ಪಕ್ಷಗಳ ನಡುವೆ ಸಂಘರ್ಷ ನಡೆದಿತ್ತು. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಮಾರ್ಕ್ಸ್`ವಾದಿಗಳು ರಾಜಕಾರಣವನ್ನು ತ್ಯಜಿಸಿ, ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯ ಆರಂಭಿಸಿದ್ದರು. ಮಾದಕದ್ರವ್ಯ ಕಳ್ಳಸಾಗಣೆ ಮತ್ತು ಮಾರಾಟ ಜಾಲ ಹೊಂದಿದ್ದವರು ಬಂಡುಕೋರರ ಗುಂಪು ಸೇರಿದ್ದರಿಂದ ಆಂತರಿಕ ಕಲಹ ಆರಂಭವಾಯಿತು. ತದನಂತರ ಬಂಡುಕೋರರ ಹಣಕಾಸು ಪೂರೈಕೆಗಾಗಿ ಅಪಹರಣದಂತಹ ಪ್ರಕರಣಗಳು ಹೆಚ್ಚಾದವು. ನಾಲ್ಕು ವರ್ಷಗಳ ನಿರಂತರ ಕಾಲ ಆಗಾಗ್ಗೆ ಮಾತುಕತೆ ನಡೆಸಿದ ಅಧ್ಯಕ್ಷ ಸ್ಯಾಂಟೋಸ್‌ ಅವರು, ಬಂಡುಕೋರರನ್ನು ಕೊಂಚ ಮಟ್ಟಿಗೆ ಮನವೊಲಿಸಿ, ಕಳೆದ ಆಗಸ್ಟ್ ತಿಂಗಳಲ್ಲಿ ಬಂಡುಕೋರರು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದ್ದರು.

Leave a Reply

comments

Related Articles

error: