ದೇಶಪ್ರಮುಖ ಸುದ್ದಿ

ಮುಂಬೈ ಪೆಟ್ರೋಲ್ ಬಂಕ್‍ಗಳಲ್ಲಿ ನಕಲಿ ಮೀಟರ್ ಅಳವಡಿಸಿ ವಂಚನೆ !

ಮುಂಬೈ, ಜೂ.20 : ಥಾಣೆಯ ಕ್ರೈಂ ಬ್ರಾಂಚ್ ಪೊಲೀಸರು ಇಂದು ಪ್ರಮುಖ ಕಾರ್ಯಾಚರಣೆ ನಡೆಸಿದ್ದು, ನಕಲಿ ಮೀಟರ್ ಅಳವಡಿಸಿದ್ದ 7 ಪೆಟ್ರೋಲ್ ಬಂಕ್‍ಗಳನ್ನು ಬಂದ್ ಮಾಡಿಸಿದ್ದಾರೆ. ಒಂಭತ್ತು ವಿವಿಧ ಪೆಟ್ರೋಲ್ ಬಂಕ್ ಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದಾಗ, 7 ಬಂಕ್ ಗಳಲ್ಲಿ ವಿಶೇಷ ಮೈಕ್ರೊಚಿಪ್ ಅಳವಡಿಸಿ ಪೆಟ್ರೋಲ್ ಹರಿಯುವಿಕೆ ಪ್ರಮಾಣವನ್ನು ಕಡಿಮೆ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ವಿಷಯ ಬಯಲಾಗಿದೆ.

ಕಳೆದ ಮೇ ತಿಂಗಳಲ್ಲಿ ವಿನಯ್ ಶೆಟ್ಟಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆ ನಡೆಸಿದಾಗ ಪೆಟ್ರೋಲ್ ಬಂಕ್‍ಗಳ ಮೀಟರ್‍ನೊಳಗೆ ಚಿಪ್ ಅಳವಡಿಸಿದ್ದ ಮಾಹಿತಿ ಸಿಕ್ಕಿತ್ತು. ಉತ್ತರ ಪ್ರದೇಶದ ಅನೇಕ ಬಂಕ್‍ಗಳಲ್ಲಿಯೂ ಇಂತಹ ಚಿಪ್‍ಗಳನ್ನು ಅಳವಡಿಸಲಾಗಿತ್ತು ಎಂಬ ವಿಷಯ ಗೊತ್ತಾಗಿತ್ತು. ಇದೇ ಸುಳಿವು ಆಧರಿಸಿ ಇಂದು ಥಾಣೆ, ದೊಂಬಿವಿಲಿ, ಖೋಪೊಲಿಯಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಇದಿಷ್ಟೇ ಅಲ್ಲದೆ ಇನ್ನೂ ಹಲವಾರು ಪೆಟ್ರೋಲ್ ಬಂಕ್‍ಗಳಲ್ಲಿ ಚಿಪ್ ಅಳವಡಿಸಿ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್ ಹರಿಯುವಂತೆ ಮಾಡಿ ವಂಚಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ.  ಈ ಪಟ್ರೋಲ್ ಬಂಕ್‍ಗಳ ಮೇಲೆಯೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಅಭಿಶೇಕ್ ತ್ರಿಮುಖೆ ಅವರು ತಿಳಿಸಿದ್ದಾರೆ.

-ಎನ್.ಬಿ.ಎನ್.

Leave a Reply

comments

Related Articles

error: