ಮೈಸೂರು

ಬಿಜೆಪಿ ಯುವಮೋರ್ಚಾ ವತಿಯಿಂದ ಇಂದು ನಡೆದ ಗ್ರಾಮೀಣ ಕ್ರೀಡೋತ್ಸವ

ಮೈಸೂರು, ಜೂ.20: ಪಂಡಿತ್ ಧೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾ ವತಿಯಿಂದ ಇಂದು ಮೈಸೂರು ಜಿಲ್ಲೆಯ ವರುಣಾ  ವಿಧಾನಸಭಾ ಕ್ಷೇತ್ರದ ಚಿಕ್ಕಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ  ಎಸ್. ಸಿ ಅಶೋಕ್, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ ರವರು ಉದ್ಘಾಟಿಸಿ ಚಾಲನೆ  ನೀಡಿದರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಬೆನ್ನು ತಟ್ಟುವುದರ ಮುಖಾಂತರ ಮಾತನಾಡಿದ ಎಸ್ ಸಿ ಅಶೋಕ್ ರವರು, ನಮ್ಮ ಭಾರತವನ್ನು ವಿಶ್ವಗುರು ಮಾಡಲು ನಿಮ್ಮಂತಹ ತರುಣರ ಅಗತ್ಯ ಹೆಚ್ಚಾಗಿದೆ. ಭವ್ಯಭಾರತವನ್ನು ನಿರ್ಮಾಣ ಮಾಡುವುದಷ್ಟೇ ನಮ್ಮ ಕೆಲಸವಲ್ಲ ಯುವಕರು ಓದಿನ ಜೊತೆಗೆ ಇಂತಹ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿದರೆ ಅವರ ಆರೋಗ್ಯದ ಜೊತೆ ಉತ್ತಮ ಹವ್ಯಾಸಗಳನ್ನೂ ಮೈದೂಡಿಸಿಕೊಳ್ಳಬಹುದೆಂದು  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ತದನಂತರದಲ್ಲಿ ಮಾತನಾಡಿದ ಕಾಪು ಸಿದ್ದಲಿಂಗಸ್ವಾಮಿ ಅವರು ರಾಜ್ಯಾದ್ಯಂತ ನೆಡೆಯುತ್ತಿರುವ ನಮ್ಮ ಈ ಪಂಡಿತ್ ಧೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿಯ ಕಾರ್ಯಕ್ರಮದ ಜೊತೆಜೊತೆಗೆ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಗಳು ಹಳ್ಳಿಗಾಡಿನ ಯುವಕರಲ್ಲಿ ಚೈತನ್ಯ ತುಂಬುತ್ತಿದೆ. ಜೊತೆಗೆ ಗ್ರಾಮೀಣ ಜನರು ಈ ಯುವಮಿತ್ರರ ಆಟವನ್ನು ಕಣ್ತುಂಬಿಕೊಳ್ಳಲು ಹಾತೊರೆಯುತ್ತಿರುವುದನ್ನು ನೋಡಿದರೆ ಈ ಗ್ರಾಮೀಣ ಕ್ರೀಡೆಗೆ ಸರಿಸಾಟಿಯೇ ಇಲ್ಲದಂತಹ ದೃಶ್ಯ ಕಣ್ಣೆದುರು ಕಾಣುತ್ತಿದೆ ಎಂದು  ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವರುಣಾ ಕ್ಷೇತ್ರದ ಅಧ್ಯಕ್ಷರಾದ ಶಿವಯ್ಯ, ಕ್ಷೇತ್ರ ಯುವಮೋರ್ಚಾ ಅಧ್ಯಕ್ಷರಾದ ಕಾರ್ತಿಕ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗೊರೂರು ಶಿವು, ವಿಜಯ್ ಕುಮಾರ್. ಕೆ. ಎನ್ ಪುಟ್ಟಬುದ್ದಿ,ಮಹೇಂದ್ರ, ಸಿದ್ದವೀರಪ್ಪ, ಗುರುಮಲ್ಲಮ್ಮ , ಶಿವಬಸಪ್ಪ, ವೆಂಕಟರಮಣಶೆಟ್ಟಿ, ತಾ ಪಂ ವೀಣಾಗುರುಮೂರ್ತಿ, ಶ್ರೀಧರ್,ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ನೂರಾರು ಕ್ರೀಡಾಪಟುಗಳು,ನೂರಾರು ಕ್ರೀಡಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: