ಪ್ರಮುಖ ಸುದ್ದಿ

ಸಿಎಫ್‌ಟಿಆರ್‌ಐ ನಿರ್ದೇಶಕರಿಂದ ಕನ್ನಡ ವಿರೋಧಿ ಧೋರಣೆ: ಕ್ರಮಕ್ಕೆ ಸಂದೇಶ್ ನಾಗರಾಜ್ ಒತ್ತಾಯ

ಪ್ರಮುಖ ಸುದ್ದಿ, ಬೆಂಗಳೂರು, ಜೂ.20: ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕನ್ನಡ ಭಾಷೆಗೆ ಅವಮಾನ ಮಾಡುವ ಕೆಲಸವಾಗುತ್ತಿದೆ. ಪ್ರೊ.ರಾಮರಾಜಶೇಖರನ್ ಎಂಬುವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕನ್ನಡ ವಿರೋಧಿ ಧೋರಣೆ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್‌ನ ಸಂದೇಶ್ ನಾಗರಾಜ್ ಆಗ್ರಹಿಸಿದರು.

ಮಂಗಳವಾರ ವಿಧಾನಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸಿಎಫ್‌ಟಿಆರ್‌ಐ ನಿರ್ದೇಶಕ ರಾಮರಾಜಶೇಖರನ್ ವಿರುದ್ಧ ಚಟುವಟಿಕೆಯಲ್ಲಿ ಭಾಗವಹಿಸಿದರೆಂಬ ಕಾರಣಕ್ಕೆ ಅಲ್ಲಿನ ಮೂವರು ನೌಕರರನ್ನು ವಿನಾಕಾರಣ  ಅಮಾನತು ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಆಹಾರ-ವಿಜ್ಞಾನ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿದ್ದಾರೆ. ಕನ್ನಡ ಸಹೃದಯ ಬಳಗ ಸಂಘವನ್ನು ಮುಚ್ಚಿಸಿದ್ದಾರೆ. ಇಡೀ ಸಂಸ್ಥೆಯನ್ನು ತಮಿಳುಮಯ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.

ಮೈಸೂರು ಮಹಾರಾಜರು ಕನ್ನಡ ನಾಡಿನಲ್ಲಿ ಸಿಎಫ್‌ಟಿಆರ್‌ಐ ಸ್ಥಾನಪೆಯಾಗಬೇಕೆಂಬ ಉದ್ದೇಶದಿಂದ ತಮ್ಮ ಚಲುವಾಂಬ ಪ್ಯಾಲೆಸ್ ಬಂಗಲೆಯನ್ನೇ ಬಿಟ್ಟುಕೊಟ್ಟಿದ್ದರು. ಆದರೆ, ಇಂದಿನ ನಿರ್ದೇಶಕರು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಂಸ್ಥೆಯನ್ನು ತಮಿಳುನಾಡುಮಯವನ್ನಾಗಿ ಮಾಡಲು ಹೊರಟಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. (ವರದಿ ಬಿ.ಎಂ)

Leave a Reply

comments

Related Articles

error: