ಮೈಸೂರು

ಸಾಂಸ್ಕೃತಿಕ ನಗರಿಗೆ ಯೋಗಾಯೋಗ: ಸಾವಿರಾರು ಮಂದಿಯಿಂದ ಸಾಮೂಹಿಕ ಯೋಗ ಪ್ರದರ್ಶನ

 

ಮೈಸೂರು, ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಗಿನ್ನೀಸ್ ದಾಖಲೆಯ ಸಾಮೂಹಿಕ ಯೋಗ ಪ್ರದರ್ಶನ ರೇಸ್ ಕೋರ್ಸ್ ಮೈದಾನದಲ್ಲಿ ಬುಧವಾರ ಬೆಳಗ್ಗೆ ನಡೆಯಿತು. ಸಾವಿರಾರು ಮಂದಿ ಯೋಗಪಟುಗಳು ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಗಿನ್ನೀಸ್ ದಾಖಲೆಗೆ ಮುನ್ನುಡಿ ಬರೆದರು.

ರೇಸ್ ಕೋರ್ಸ್ನ 139.30 ಎಕರೆ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. ಗಿನ್ನೀಸ್ ದಾಖಲೆಯನ್ನು ನಿರ್ಮಿಸುವ ಜಿಲ್ಲಾಡಳಿತದ ಆಶಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂಜಾನೆಯಿಂದಲೇ ಮೈದಾನದ ಕಡೆ ಯೋಗಪಟುಗಳು ಆಗಮಿಸಲು ಆರಂಭಿಸಿದರು. ಮೈದಾನಕ್ಕೆ ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಮೈದಾನದ 7 ಪ್ರವೇಶ ದ್ವಾರಗಳಲ್ಲಿ ಬಾರ್ ಕೋಡ್ ಇರುವ ಉಚಿತ ಟಿಕೆಟ್ ನೀಡಿ ನಂತರ ಕೌಂಟರ್ ಗಳಲ್ಲಿ ಟಿಕೆಟ್ ಗಳನ್ನು ವಾಪಸ್ ಪಡೆದು ಒಳಬಿಡಲಾಯಿತು. ಮೊದಲೇ ಸೂಚಿಸಿದಂತೆ ಯೋಗಪಟುಗಳೆ ಮ್ಯಾಟ್ ತಂದಿದ್ದರು. ತಮಗೆ ಸೂಚಿಸಿದ ಸ್ಥಳದಲ್ಲಿ ಕುಳಿತು ಯೋಗಾಭ್ಯಾಸ ಮಾಡಲು ಸಿದ್ಧರಾದರು.

ಯೋಗಾಭ್ಯಾಸದ ಆರಂಭದಲ್ಲಿ ಒಂದು ನಿಮಿಷ ಪ್ರಾರ್ಥನೆ ಸಲ್ಲಿಸಿ ಬಳಿಕ ಸಮಸ್ಥಿತಿಗೆ ಬಂದು ಕುತ್ತಿಗೆ ಹಿಂದೆ, ಮುಂದು, ಎಡ ಬಲಕ್ಕೆ ತಿರುಗಿಸಿ ಕುತ್ತಿಗೆಯನ್ನು  ವೃತ್ತಾಕಾರವಾಗಿ ತಿರುಗಿಸುವುದು, ಭುಜದ ವ್ಯಾಯಾಮ, ಸೊಂಟದ ವ್ಯಾಯಾಮ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮ ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಸೇರಿದಂತೆ ವಿವಿಧ ಆಸನಗಳನ್ನು ಮಾಡಿದ ಬಳಿಕ ಶೀತಲೀ ಪ್ರಾಣಾಯಾಮ, ಭ್ರಾಮರೀ ಪ್ರಾಣಾಯಾಮ, ಧ್ಯಾನ ಹಾಗೂ ಶಾಂತಿಮಂತ್ರದೊಂದಿಗೆ ಯೋಗಾಭ್ಯಾಸ ಮುಕ್ತಾಯವಾಯಿತು.

ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಪ್ರತಾಪಸಿಂಹ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವ ಎಸ್.ರಾಮದಾಸ್, ಮೇಯರ್ ಎಂ.ಜೆ.ರವಿಕುಮಾರ್, ಹೆಚ್.ವಿ.ರಾಜೀವ್, ಮಾಜಿ ಮೇಯರ್ ಆರ್,ಲಿಂಗಪ್ಪ, ಜಿಲ್ಲಾಧಿಕಾರಿ ರಂದೀಪ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.  (ವರದಿ ಬಿ.ಎಂ)

 

Leave a Reply

comments

Related Articles

error: