ಮೈಸೂರು

ಯೋಗ ಗಿನ್ನಿಸ್ ದಾಖಲೆ ಪ್ರದರ್ಶನ: 50 ಸಾವಿರ ಮಂದಿ ಭಾಗಿ, 600 ಪೊಲೀಸರಿಂದ ಭದ್ರತೆ

ಮೈಸೂರು,ಜೂ.21-ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಬುಧವಾರ ನಗರದ ರೇಸ್ ಕೋರ್ಸ್ ನಲ್ಲಿ ಆಯೋಜಿಸಿದ್ದ ಯೋಗ ಗಿನ್ನಿಸ್ ದಾಖಲೆ ಪ್ರದರ್ಶನದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಯೋಗ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆಯಲು ಪ್ರಯತ್ನಿಸಲಾಗಿದೆ.

ಕಾರ್ಯಕ್ರಮದಲ್ಲಿ ನಾಗಭೂಷಣ್, ಕಾಳಜಿ, ರಂಗನಾಥ್ ಯೋಗ ಗುರುಗಳಾಗಿ ಕಾರ್ಯ ನಿರ್ವಹಿಸಿದರು. ಬಿ.ಪಿ. ಮೂರ್ತಿ ಸಂಕಲ್ಪ ಮಾಡಿದರೆ, ಡಾ.ಗಣೇಶ್ ಕುಮಾರ್ ಶಂಖನಾದ ಮಾಡಿದರು.

600 ಮಂದಿ ಪೊಲೀಸರಿಂದ ಭದ್ರತೆ: ಯೋಗ ಪ್ರದರ್ಶನದ ಮೂಲಕ ಗಿನ್ನಿಸ್ ದಾಖಲೆ ಪ್ರಯತ್ನ ಇದ್ದಾಗಿದ್ದರಿಂದ ನಿರೀಕ್ಷೆಗೂ ಮೀರಿದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿದ್ದರಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂಬ ಕಾರಣದಿಂದ 600 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಪ್ರಮಾಣ ಪತ್ರ ಪಡೆಯುವ ಸ್ಥಳ: ಕಾರ್ಯಕ್ರಮದ ನಂತರ ಯೋಗಪಟುಗಳು ಪ್ರಮಾಣ ಪತ್ರ ಪಡೆದುಕೊಳ್ಳಲು ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರಮಾಣ ಪತ್ರ ಸಿಗದಿರುವ ಯೋಗಪಟುಗಳು ತಮ್ಮ ಟಿಕೆಟ್ ನೀಡಿ ಡಿಡಿಪಿಯು, ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಡಿಡಿಪಿಐ, ಪ್ರವಾಸೋದ್ಯಮ ಇಲಾಖೆ, ಜಿಎಸ್ಎಸ್ ಯೋಗಾ ಕೇಂದ್ರ ಕುವೆಂಪುನಗರ, ಸೇಫ್ ವ್ಹೀಲ್ಸ್ ಸರಸ್ವತಿಪುರಂ, ಚಿರಾಗ್ ಯಾಡ್ಸ್ ಕಾಳಿದಾಸ ರಸ್ತೆ, ಆರ್.ಐ.ಐ.ಐ.ಟಿ. ಹೆಬ್ಬಾಳ ಇಲ್ಲಿ ಪ್ರಮಾಣ ಪತ್ರ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯನಿರ್ವಹಿಸಿದವರ ಸಂಖ್ಯೆ: ಸ್ಟೀವರ್ಡ್ -1258, ಸ್ವಯಂಸೇವಕರು -2000, ಯೋಗ ತರಬೇತಿದಾರರು- 170 ಕಾರ್ಯನಿರ್ವಹಿಸಿದ್ದಾರೆ.

ಇದಲ್ಲದೆ, ಕುಡಿಯುವ ನೀರಿನ ವ್ಯವಸ್ಥೆ, ಅಂಬ್ಯುಲೆನ್ಸ್ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಗಿನ್ನಿಸ್ ಪುಟದಲ್ಲಿ ಮೈಸೂರಿನ ಹೆಸರು ಸೇರಲಿ ಎಂಬುದು ಎಲ್ಲರ ಆಶಯವಾಗಿದೆ. (ವರದಿ-ಎಸ್.ಎನ್, ಕೆ.ಎಸ್, ಎಂ.ಎನ್)

 

Leave a Reply

comments

Related Articles

error: