ದೇಶಪ್ರಮುಖ ಸುದ್ದಿ

ತಲಾಖ್ ಹೇಳಿ ವಿಚ್ಛೇದನ ಕೊಡುವುದನ್ನು ಒಪ್ಪಲಾಗದು: ಮುಸ್ಲಿಂ ಮಹಿಳೆಯರ ಬೆಂಬಲಕ್ಕೆ ಬಂದ ಕೇಂದ್ರ ಸರ್ಕಾರ

ವಿಚ್ಛೇದನ ನೀಡಲು ಮೂರು ಬಾರಿ ತಲಾಖ್‌ ಹೇಳುವುದು, ನಿಖಾ ಹಲಾಲಾ, ಬಹುಪತ್ನಿತ್ವ –ಮುಸಲ್ಮಾನ ಸಮುದಾಯದಲ್ಲಿರುವ ಇಂತಹ ಪದ್ಧತಿಗಳನ್ನು ಮುಂದುವರಿಸಲು ತನ್ನ ಸಹಮತ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

ಶಾಯರೋ ಬಾನೋ ಎಂಬ ಮುಸ್ಲಿಂ ಮಹಿಳೆ ಇಂತಹ ಪದ್ಧತಿಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ತನ್ನ ನಿಲುವು ಸ್ಪಷ್ಟಪಡಿಸಲು ಪ್ರಮಾಣಪತ್ರ ಸಲ್ಲಿರುವ ಕೇಂದ್ರ ಸರ್ಕಾರ, ಈ ಆಚರಣೆಗಳಿಗೆ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಮರುಪರಿಶೀಲಿಸ ಬೇಕಾಗಿದೆ ಎಂದು ಪ್ರತಿಪಾದಿಸಿದೆ.

ಲಿಂಗ ಸಮಾನತೆ, ಧಾರ್ಮಿಕ ಪದ್ಧತಿಗಳು ಮತ್ತು ವಿವಿಧ ಇಸ್ಲಾಮಿಕ್‌ ದೇಶಗಳಲ್ಲಿರುವ ವೈವಾಹಿಕ ಕಾನೂನುಗಳನ್ನು ಪರಿಶೀಲಿಸಿರುವ ಕೇಂದ್ರ ಸರ್ಕಾರವು, ಜಾತ್ಯತೀತ ಪ್ರಜಾಪ್ರಭುತ್ವ ದೇಶವೊಂದರಲ್ಲಿ ಮಹಿಳೆಯರಿಗೆ ಕೊಡಬೇಕಾದ ಸಮಾನ ಹಕ್ಕು ಹಾಗೂ ಗೌರವವನ್ನು ಧರ್ಮದ ಆಧಾರದಲ್ಲಿ ನಿರಾಕರಿಸಬಹುದೇ ಎಂಬ ಮೂಲ ಪ್ರಶ್ನೆಗೆ ನ್ಯಾಯಾಲಯ ಉತ್ತರ ಕಂಡುಕೊಳ್ಳಬೇಕಿದೆ ಎಂದು ಕಾನೂನು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕುಲಿತಾ ವಿಜಯವರ್ಗೀಯ ಅವರು ಸಲ್ಲಿಸಿರುವ ಪ್ರಮಾಣಪತ್ರದ ಮೂಲಕ ತನ್ನ ಅಭಿಪ್ರಾಯ ಸ್ಪಷ್ಟಪಡಿಸಿದೆ.

ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಬೆಳವಣಿಗೆಯಲ್ಲಿ ಮಹಿಳೆಯರನ್ನು ಸಮಾನ ಭಾಗಿದಾರರನ್ನಾಗಿಸಬೇಕು. ಯಾವುದೇ ಪದ್ಧತಿ, ಧರ್ಮದ ಕಾರಣಕ್ಕೆ ಮಹಿಳೆಯರು ಅವಕಾಶಗಳಿಂದ ವಂಚಿತರಾಗಬಾರದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

Leave a Reply

comments

Related Articles

error: