ಮೈಸೂರು

ಮೈಸೂರಿನಲ್ಲಿನ್ನು ಅಮರನಾಥ ಯಾತ್ರೆ ಆರಂಭ

amaranatha2ಮಂಜು ಮುಸುಕಿದ ವಾತಾವರಣ, ಕೊರೆಯುವ ಚಳಿ, ಶೀತಲಗಾಳಿಯ ಜೊತೆ ಆಕಾಶವೇ ಭುವಿಗಿಳಿದಂತೆ ಕಾಣಿಸುವಷ್ಟು ಸುಂದರ ನಯನಮನೋಹರ ಹಿಮಾಚ್ಛಾದಿತ ಪ್ರದೇಶ. ಒಮ್ಮೆ ನೋಡುಗರಿಗೆ ನಾವೇನಾದರೂ ಕಾಶ್ಮೀರದ ಬಳಿ ಬಂದಿದ್ದೇವಾ ಅಂತ ಅನ್ನಿಸದೇ ಇರದು. ಅಂತಹ ಅನುಭವವನ್ನು ನೀಡಲೆಂದೆ ಫನ್ ವರ್ಲ್ಡ್ ಇಂಡಿಯಾ ರೆಸಾರ್ಟ್ ಈ ಬಾರಿ ಮೈಸೂರಿನ ಜನತೆಗೆ ಅಮರನಾಥ ಯಾತ್ರೆಯನ್ನು ಮಾಡಿಸಲಿದೆ. ಅಮರನಾಥದ ಗುಹಾಂತರ ದೇವಾಲಯದಲ್ಲಿ ಭಗವಂತನ ಸಾಕ್ಷಾತ್ಕಾರವಾಗಲಿದೆ.

ಮೈಸೂರಿನಲ್ಲಿಯೇ ಅಮರನಾಥ ಗುಹಾಂತರ ದೇವಾಲಯ ರೂಪುಗೊಳ್ಳುತ್ತಿದೆ. ನಾವು ಇಷ್ಟು ದಿನ ಇಲ್ಲಿಯೇ ಇದ್ದರೂ ಈ ವಿಷಯ ನಮಗೆ ತಿಳಿದಿರಲಿಲ್ಲ. ಬಹುಶಃ ನಮಗೆ ದಿಕ್ಕು ತಪ್ಪಿಸುತ್ತಿರಬೇಕು ಎಂದುಕೊಳ್ಳಬೇಡಿ  ನಿಮಗೆ ಇದು ಅಚ್ಚರಿ ಅನಿಸಿದರೂ ಸತ್ಯ. ಭಾನುವಾರದಿಂದಲೇ ಮೈಸೂರಿನಲ್ಲಿ ನೀವು ಅಮರನಾಥ ಯಾತ್ರೆಯನ್ನು ಕೈಗೊಳ್ಳಬಹುದು.

ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯೇ ವಸ್ತು ಪ್ರದರ್ಶನ. ಈ ಬಾರಿ ವಸ್ತು ಪ್ರದರ್ಶನ ಮೈದಾನಕ್ಕೆ ಭೇಟಿ ನೀಡುವ ವೀಕ್ಷಕರಿಗೆ ಅಮರನಾಥ ಯಾತ್ರೆಯ ಅನುಭವವಾಗಲಿದೆ. ಅಮರನಾಥ ಯಾತ್ರೆಯ ಕುರಿತು ಫನ್ ವರ್ಲ್ಡ್ ಇಂಡಿಯಾ ರೆಸಾರ್ಟ್ ನ ಉಸ್ತುವಾರಿ  ಮಲ್ಲಿಕಾರ್ಜುನಯ್ಯ ಅವರನ್ನು ಶನಿವಾರ ಸಿಟಿಟುಡೆ ಮಾತನಾಡಿಸಿತು.

ಅಮರನಾಥ ಯಾತ್ರೆಯ ಅನುಭವ ನೀಡುವ ಉದ್ದೇಶ

ಎಷ್ಟೋ ಜನರಿಗೆ ಭಗವಂತನ ಸಾಕ್ಷಾತ್ಕಾರ ಸ್ಥಳವಾದ ಅಮರನಾಥ ಯಾತ್ರೆಗೆ ಹೋಗಬೇಕೆಂದಿರುತ್ತದೆ ಆದರೆ ಯಾವುದೋ ಕಾರಣದಿಂದ ಅಲ್ಲಿಗೆ ಹೋಗಲು ಸಾಧ್ಯವಾಗಿರುವುದಿಲ್ಲ. ಅಂಥಹವರಿಗಾಗಿಯೇ ಅಮರನಾಥ ಯಾತ್ರಾ ತದ್ರೂಪವಾಗಿ ಈ ಅನುಭವ ನೀಡಲು ನಿರ್ಧರಿಸಲಾಯಿತು.

ಇದೇ ಮೊದಲ ಬಾರಿಗೆ ಮಾಡ್ತಾ ಇರೋದಾ? ಇದನ್ನು ಜನತೆ ಇಷ್ಟ ಪಡಬಹುದಾ?

2009ರಲ್ಲಿ ಮಾಡಿದ್ದೇವೆ. ಆಗ ಜನರಿಂದ ತುಂಬಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲರೂ ಇಷ್ಟಪಟ್ಟು ಬಂದು ನೋಡಿಹೋಗುತ್ತಿದ್ದರು.

amaranatha-web-3ಮೈಸೂರಲ್ಲಷ್ಟೇ ಈ ರೀತಿ ಪ್ರಯೋಗ ಮಾಡಿರೋದಾ ಅಥವಾ..?

ಬಹುತೇಕ ಎಲ್ಲ ರಾಜ್ಯಗಳಲ್ಲಿ ಮಾಡಿದ್ದೇವೆ. ಕೇವಲ ಮೈಸೂರಲ್ಲಷ್ಟೇ ಅಲ್ಲ. ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರದರ್ಶಿಸಿದ್ದೇವೆ. ಎಲ್ಲ ಕಡೆಯೂ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಅಮರನಾಥ ಯಾತ್ರೆ ಮಾತ್ರವಲ್ಲ. ವೈಷ್ಣೋದೇವಿ, ತಾಜಮಹಲ್ ಗಳನ್ನೂ ನಿರ್ಮಿಸಿ ಜನರನ್ನು ಸೆಳೆಯಲು ಯಶಸ್ವಿಯಾಗಿದ್ದೇವೆ.

ಅಮರನಾಥ ಅನುಭವವನ್ನೇ ನೀಡಲಿದೆಯಾ?

ಖಂಡಿತ, ಅಲ್ಲಿ ಹೋದಾಗ ಜನರಿಗೆ ಯಾವ ರೀತಿ ಅನುಭವವಾಗಲಿದೆಯೋ ಅದೇ ಅನುಭವ ಇಲ್ಲಿಯೂ ಆಗಲಿದೆ ಎನ್ನುವ ವಿಶ್ವಾಸವಿದೆ. 300ಅಡಿ ಮೇಲಕ್ಕೆ ದೇವಾಲಯವನ್ನು ನಿರ್ಮಿಸಲಾಗಿದ್ದು, ಹಿಮದಿಂದಾವೃತವಾದಂತಹ ಶಿವಲಿಂಗವೂ ರೂಪುಗೊಂಡಿದೆ.  ಒಳಗೆ ಪ್ರವೇಶಿಸುತ್ತಿದ್ದಂತೆ ಶೀತಲಗಾಳಿಯು ನಿಮ್ಮನ್ನು ಸ್ವಾಗತಿಸಲಿದೆ. ತಪಸ್ಸಿಗೆ ಕುಳಿತ ಋಷಿಮುನಿಗಳ ಚಿತ್ರಗಳು ಗಮನ ಸೆಳೆಯಲಿವೆ. ನಿರ್ಮಾಣಕ್ಕಾಗಿಯೇ ಸುಮಾರು 70ಲಕ್ಷ ರೂ. ವೆಚ್ಚವಾಗಿದ್ದು, ಪ್ರೇಕ್ಷಕರನ್ನು ಸಂತೋಷಗೊಳಿಸುವುದೇ ನಮ್ಮ ಧ್ಯೇಯ.

ಪ್ರದರ್ಶನ ಸಮಯ

ಮಧ್ಯಾಹ್ನ 3ಗಂಟೆಯಿಂದ ರಾತ್ರಿ 10ಗಂಟೆಯವರೆಗೆ

ಒಟ್ಟಿನಲ್ಲಿ ಈ ಬಾರಿ ದಸರಾ ವಸ್ತು ಪ್ರದರ್ಶನ ಮೈದಾನ ಮಕ್ಕಳಿಂದ ಮೊದಲ್ಗೊಂಡು ವೃದ್ಧರವರೆಗೂ ತನ್ನತ್ತ ಸೆಳೆಯಲಿದೆ. ಅಮರನಾಥದಂತೆಯೇ ಶಿಖರಗಳು ರೂಪುಗೊಂಡಿದ್ದು, ನಡು-ನಡುವೆ ಕಾರಂಜಿಗಳು ಚಿಮ್ಮಲಿವೆ. ಅದರಲ್ಲೂ ವಿದ್ಯುತ್ ಬೆಳಕನ್ನು  ಅಳವಡಿಸಿರುವುದರಿಂದ ಜನತೆಯನ್ನು ಇನ್ನಷ್ಟು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ದಸರಾ ಉತ್ಸವ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ನೋಡಿ ಮನತಣಿಸಿಕೊಂಡಿದ್ದ ಮೈಸೂರು ಜನತೆ ಅಮರನಾಥಯಾತ್ರೆಯನ್ನೂ ಮಾಡಿ ಕೃತಾರ್ಥರಾಗಬಹುದು.

 

ಸುಹಾಸಿನಿ ಹೆಗಡೆ

Leave a Reply

comments

Related Articles

error: