ಕರ್ನಾಟಕಪ್ರಮುಖ ಸುದ್ದಿ

ಮಲೇರಿಯಾ ವಿರೋಧ ಮಾಸಾಚರಣೆ-2017 ಜಾಥಾಕ್ಕೆ ಚಾಲನೆ : ಜ್ವರ ಬಂದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ಸಲಹೆ

ರಾಜ್ಯ(ಮಂಡ್ಯ)ಜೂ.21:- ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ-2017 ಜಾಥಾ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬದ ಕಲ್ಯಾಣಾಧಿಕಾರಿ ಕಚೇರಿ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ನಡೆದ ಮಲೇರಿಯಾ ವಿರೋಧ ಮಾಸಾಚಾರಣೆ ಜಾಥಾ ಕಾರ್ಯಕ್ರಮದಲ್ಲಿ `ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸಿ’ 2020ರ ವೇಳೆಗೆ ಮಲೇರಿಯಾ ನಿರ್ಮೂಲನೆಗೆ ಪಣ ತೊಡೋಣ ಮಲೇರಿಯ ಮುಕ್ತ ಸಮಾಜ ನಿರ್ಮಿಸೋಣ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಪಟ್ಟಣದಾದ್ಯಂತ ಮೆರವಣಿಗೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಹೊರಟ ಮರವಣಿಗೆಯು ಡಾ.ರಾಜ್‍ಕುಮಾರ್ ವೃತ್ತ, ವಿಜಯಬ್ಯಾಂಕ್ ರಸ್ತೆ, ಪಿಇಎಸ್ ಕಾಲೇಜು ವೃತ್ತ, ಆನಂದ್‍ರಾವ್ ವೃತ್ತ ಸೇರಿದಂತೆ ವಿವಿಧೆಡೆ ಸಂಚರಿಸಿ ಮಲೇರಿಯ ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಮೂಡಿಸಿತು. ಚಾಲನೆ ನೀಡಿ ಮಾತನಾಡಿದ ಟಿಎಚ್‍ಓ ಡಾ.ಎಂ.ಎನ್.ಆಶಾಲತ, ಮಲೇರಿಯ ರೋಗವು ಸೊಳ್ಳೆಯಿಂದ ಹರಡುವುದರಿಂದ ಸಾರ್ವಜನಿಕರು ಜಾಗೃತಿವಹಿಸಬೇಕು. ಮಲೇರಿಯ ರೋಗವನ್ನು ತಡೆಯಲು ಸರಕಾರವು ವ್ಯಾಪಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಮೂಲಕ ಸಾರ್ವಜನಿಕರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಳ್ಳಿಗಳಿಗೆ ಭೇಟಿಕೊಟ್ಟು ಮನೆಮನೆಗೆ ತೆರಳಿ ಜ್ವರದ ಬಗ್ಗೆ ಮಾಹಿತಿ ನೀಡಿ, ಅದರ ಲಕ್ಷಣಗಳ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಜ್ವರ ಇರುವಂತಹ ಎಲ್ಲರ ರಕ್ತಗಳನ್ನು ಪರೀಕ್ಷೆ ಮಾಡುತ್ತಿದ್ದೇವೆ. ಜತೆಗೆ ಕ್ಲೋರೋಕ್ಟಿನ್ ಮಾತ್ರೆಯನ್ನು ವಯಸ್ಸಿಗೆ ಅನುಗುಣವಾಗಿ ವಿತರಣೆ ಮಾಡುತ್ತಿದ್ದೇವೆ. ಹಾಗಾಗಿ ಜ್ವರ ಕಾಣಿಸಿಕೊಂಡ ತಕ್ಷಣ ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಥವಾ ಆಸ್ಪತ್ರೆಗಳಿಗೆ ಭೇಟಿಕೊಟ್ಟು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
2020ಕ್ಕೆ ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಮಲೇರಿಯಾ ಕಾರ್ಯಪಾಲನಾ ಸಮಿತಿಯೂ ಸಾಕಷ್ಟು ನಿಯಂತ್ರಣದ ಕ್ರಮಗಳನ್ನುಕೈಗೊಂಡಿದೆ. ಗ್ರಾಮಗಳಲ್ಲಿ ಭೇಟಿಕೊಟ್ಟು ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಜನರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಅರಿವು ಮೂಡಿಸುತ್ತಿದ್ದೇವೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಮಲೇರಿಯಾದಿಂದ ದೂರವಿರಬೇಕು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಜಯಂತ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯಶಿಕ್ಷಣಾಧಿಕಾರಿ ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: