ಕರ್ನಾಟಕಪ್ರಮುಖ ಸುದ್ದಿ

ಚೆಲುವನಾರಾಯಣಸ್ವಾಮಿ ಪಲ್ಲವೋತ್ಸವಕ್ಕೆ ವೈಭವದ ತೆರೆ

ರಾಜ್ಯ(ಮಂಡ್ಯ)ಜೂ.21:- ಮೇಲುಕೋಟೆ  ಚೆಲುವನಾರಾಯಣಸ್ವಾಮಿಗೆ  ಗರುಡ ವಾಹನೋತ್ಸವ ನೆರವೇರುವುದರೊಂದಿಗೆ ದೇವಾಲಯದಲ್ಲಿ ಏಳುದಿನಗಳಿಂದ ನಡೆಯುತ್ತಿದ್ದ ಪಲ್ಲವೋತ್ಸವಕ್ಕೆ ತೆರೆಬಿದ್ದಿದೆ.

ದ್ವಾದಶಾರಾಧನೆಯ ನಂತರ ಗರುಡಾರೂಢನಾದ ಚೆಲುವನಾರಾಯಣನ ಸ್ವಾಮಿಯ ದರ್ಶನ ಮಾಡಿದ ಭಕ್ತರು ಪುನೀತಭಾವ ಹೊಂದಿದರು. ಲೋಕ ಕಲ್ಯಾಣಾರ್ಥವಾಗಿ ಆಗಮೋಕ್ತ ವಿಧಿವಿಧಾನಗಳೊಂದಿಗೆ ನಡೆಯುತ್ತಿದ್ದ ಪಲ್ಲವೋತ್ಸವದ ವೇಳೆ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಪ್ರತಿ ಮಧ್ಯಾಹ್ನ ಅಭಿಷೇಕ, ರಾತ್ರಿ ವಿವಿಧ ವಾಹನೋತ್ಸವಗಳು ನೆರವೇರಿದವು, ವೇದಘೋಷ, ದಿವ್ಯಪ್ರಬಂಧಪಾರಾಯಣ, ಮಂಗಳವಾದ್ಯದೊಂದಿಗೆ ನೆರವೇರುತ್ತಿದ್ದ ಉತ್ಸವಗಳು ಭಕ್ತರನ್ನು ಪಾವನಗೊಳಿಸಿದವು. ಈ ವರ್ಷ ಬರಗಾಲ ನಿವಾರಣೆಯಾಗಿ ನಾಡಿನಲ್ಲಿ ಸಮೃದ್ಧ ಮಳೆ-ಬೆಳೆಯಾಗಿ ಸುಭಿಕ್ಷ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.   ಸಂಪ್ರದಾಯದಂತೆ ಪಲ್ಲವೋತ್ಸವದ ಏಳು ದಿನಗಳ ಕಾಲ ಶ್ರೀರಾಮಾನುಜ ಸಹಸ್ರಮಾನೋತ್ಸವ ಸೇವಾ ವತಿಯಿಂದ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ಸಂಗೀತ ನೃತ್ಯಸಾಪ್ತಾಹ ನೆರವೇರುವುದರೊಂದಿಗೆ ಸಂಗೀತ ಸುಧೆಯನ್ನುಹರಿಸಲಾಯಿತು. ದೇವಾಲಯದ ಆವರಣಕ್ಕೆ ಚಪ್ಪರ, ತಳಿರುತೋರಣ, ಹೂವಿನ ಅಲಂಕಾರ, ಪ್ರಸಾದವಿನಿಯೋಗ, ಸೇರಿದಂತೆ ಪಲ್ಲವೋತ್ಸವದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವೀಣಾವಾದನ, ಕರ್ನಾಟಕ ಸಂಗೀತ ಹಾಡುಗಾರಿಕೆ, ಭರತನಾಟ್ಯ, ಮ್ಯಾಂಡಲಿನ್, ಪಂಚವೀಣೆ ಮುಂತಾದ ಸಂಗೀತ ಸೇವೆಗಳು ಒಂದು ವಾರಗಳ ಕಾಲ ಪ್ರತಿ ಮಧ್ಯಾಹ್ನ ಜರುಗಿತ್ತು. ಪಲ್ಲವೋತ್ಸವದಲ್ಲಿ ಆಂಧ್ರ ರಾಜ್ಯಪಾಲ ನರಸಿಂಹನ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಹನುಮಂತರಾಯಪ್ಪ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ದೇವರದರ್ಶನ ಪಡೆದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: