ಮೈಸೂರು

ಸ್ತಬ್ಧಚಿತ್ರಗಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿದ ಸಚಿವ ಹೆಚ್.ಸಿ.ಮಹದೇವಪ್ಪ

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಈ ಬಾರಿ 42 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿದ್ದು, ರಾಜ್ಯದ ಐತಿಹಾಸಿಕ ಹಿನ್ನೆಲೆ, ನೆಲ ಜಲ, ಕಲೆ, ಸಂಸ್ಕೃತಿ, ಜಾನಪದ ಪರಂಪರೆಯನ್ನು ಪ್ರತಿಬಿಂಬಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ತಬ್ಧಚಿತ್ರಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಅವರು, ಜಂಬೂ ಸವಾರಿಯ ಆಕರ್ಷಣೆಗಳಲ್ಲಿ ಸ್ತಬ್ಧಚಿತ್ರಗಳು ಪ್ರಮುಖ ಸ್ಥಾನ ಪಡೆದುಕೊಂಡಿರುವುದರಿಂದ ಅವುಗಳನ್ನು ವಿಶಿಷ್ಟವಾಗಿ ಸಿದ್ಧಪಡಿಸಿದ್ದು ಅ.11ರಂದು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಮನ ಗೆಲ್ಲಲಿವೆ. 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸ್ತಬ್ಧಚಿತ್ರಗಳು ಆಯಾ ಜಿಲ್ಲೆಗಳ ಸಂಸ್ಕೃತಿ ಪರಂಪರೆಯನ್ನು ಬಿಂಬಿಸಲಿವೆ.  ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಕಾವೇರಿ ನಿರಾವರಿ ನಿಗಮ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಆಯಾ ಇಲಾಖೆಗಳ ಕಾರ್ಯಕ್ರಮಗಳಿಗೆ ಪೂರಕವಾಗಿ ಸ್ತಬ್ಧಚಿತ್ರ ತಯಾರಿಸಲಾಗಿದ್ದು, ಜಿಲ್ಲೆಯಿಂದ ಮೈಸೂರಿಗೆ ಮಹಾರಾಣಿಯರ ಕೊಡುಗೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಜಂಬೂ ಸವಾರಿಯ ಮೆರವಣಿಗೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಕಲಾವಿದರು ಭಾಗವಹಿಸಲಿದ್ದು, ಹೊರ ರಾಜ್ಯದ ಕಲಾವಿದರೂ ಭಾಗವಹಿಸಲಿದ್ದಾರೆ. ಈ ಬಾರಿ ಮೆರವಣಿಗೆ ತಡವಾಗಿ ಆರಂಭವಾಗುವುದರಿಂದ ಕಲಾತಂಡಗಳನ್ನು 50ಕ್ಕೆ ಇಳಿಸಲಾಗಿದೆ. ಸಂವಿಧಾನದ ಆಶಯಗಳು, ರಾಜ್ಯದ, ದೇಶದ ಸಂದೇಶಗಳನ್ನು ಸಾರುವ ಕೆಲಸವನ್ನು ಈ ಬಾರಿಯ ಜಂಬೂ ಸವಾರಿಯ ಮೆರವಣಿಗೆ ಮಾಡಲಿದೆ ಎಂದು ಭರವಸೆಯಿಂದ ನುಡಿದ ಅವರು, ಕಾವೇರಿ ಜಲವಿವಾದದಲ್ಲಿ ನ್ಯಾಯಾಲಯ ಮೇಲಿಂದ ಮೇಲೆ ಆಘಾತ ನೀಡಿದ್ದರೂ ಎಲ್ಲ ಸಂಕಷ್ಟಗಳ ನಡುವೆ ದಸರಾ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ದಸರಾ ಆಚರಣೆ ಗುಂಗಿನಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡದಿರಿ ಎಂದು ಸೂಚಿಸಿದ್ದರ ಪರಿಣಾಮವಾಗಿ ಇಂದು ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.

2.15ಕ್ಕೆ ನಂದಿಧ್ವಜ ಪೂಜೆ: ಜಂಬೂ ಸವಾರಿಯಂದು ಮಧ್ಯಾಹ್ನ 2.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಮಧ್ಯಾಹ್ನ 2.45ಕ್ಕೆ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, 4.40ಕ್ಕೆ ಅಂಬಾರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಮೆರವಣಿಗೆಯುದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಗೊಳ್ಳಲಾಗಿದ್ದು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ವಿದ್ಯುತ್ ಉಳಿತಾಯ: ದಸರಾ ಸಂದರ್ಭದಲ್ಲಿ ಇಡೀ ಮೈಸೂರು ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತದೆ. ಹಾಗೆಯೇ ಈ ಬಾರಿಯು ವಿಶೇಷವಾಗಿ ಮೈಸೂರನ್ನು ಸಿಂಗರಿಸಿದ್ದು ಗಣನೀಯವಾಗಿ ವಿದ್ಯುತ್ ಉಳಿತಾಯವಾಗಿದೆ. ಪ್ರತಿ ಬಾರಿಯು ೫೦೦೦ ಕಿಲೋ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದ್ದು. ಆದರೆ ಈ ಬಾರಿ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ ಕೇವಲ 700 ಕಿಲೋ ವ್ಯಾಟ್‌ಗಳಲ್ಲೇ ಅತ್ಯಂತ ಸುಂದರವಾಗಿ ದೀಪಾಲಂಕಾರ ಮಾಡಲಾಗಿದೆ ಎಂದು ವಿವರಿಸಿದರು.

3ಡಿ ಪ್ರೊಜೆಕ್ಷನ್ ಮ್ಯಾಪಿಂಗ್: ದಸರಾವನ್ನು ಮತ್ತಷ್ಟು ಆಕರ್ಷಕವಾಗಿಸಲು ಈ ಬಾರಿ ರಾಜ್ಯದಲ್ಲಿಯೆ ಪ್ರಥಮ ಬಾರಿಗೆ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನ ಏರ್ಪಡಿಸಿದ್ದು, ಟೌನ್‌ಹಾಲ್ ಕಟ್ಟಡದ ಮೇಲೆ ದೇಶದ, ರಾಜ್ಯದ ಪಾರಂಪರಿಕ ಕಟ್ಟಡಗಳು ಮೂಡಿಬರಲಿವೆ. ಇಂದಿನಿಂದ ಅ.10ರವರೆಗೆ ರಾತ್ರಿ 8.30ರಿಂದ 10ಗಂಟೆವರೆಗೆ ಪ್ರದರ್ಶನ ನಡೆಯಲಿದ್ದು ಪ್ರವೇಶ ಉಚಿತ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತನಾ ನಜೀರ್ ಅಹಮದ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: