ಕರ್ನಾಟಕ

ಆಸ್ತಿಗಾಗಿ ಸಂಬಂಧವನ್ನೇ ಮರೆತು ನಿಷ್ಕರುಣಿಯಂತೆ ವರ್ತಿಸಿದ ಮಹಿಳೆಯ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಜ್ಯ(ಮಂಗಳೂರು)ಜೂ.21:-  ಹಣ, ಆಸ್ತಿ ವಿಚಾರದಲ್ಲಿ ಕೆಲವೊಮ್ಮೆ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗುತ್ತೆ. ಅಂಥದ್ದೇ ಘಟನೆಯೊಂದು ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಧಮ್ಮ ಎಂಬವರು ತನ್ನ ಸೊಸೆ ಮತ್ತು ಇಬ್ಬರು ಪುಟ್ಟಮಕ್ಕಳ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗುತ್ತಿರುವ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೊಯ್ಯೂರು ಗ್ರಾಮದ ನೆಕ್ಕರಕೋಡಿ ಎಂಬಲ್ಲಿ ಕಳೆದ ಭಾನುವಾರ ಜಾಗಕ್ಕೆ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು ಮುಂದಾಗುವ ವೇಳೆ ಅದಕ್ಕೆ ತಡೆಯೊಡ್ಡಲಾಗಿತ್ತು. ತನ್ನ ಮಗನ ವಶದಲ್ಲಿರುವ ಜಾಗಕ್ಕೆ ಬೇಲಿ ಹಾಕಲು ತಂದೆ-ತಾಯಿ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಜೆಸಿಬಿಗೆ ಅಡ್ಡಲಾಗಿ ಸೊಸೆ, ಇಬ್ಬರು ಎಳೆಯ ಮಕ್ಕಳು ನಿಂತಿದ್ದರು.
ಒಂದು ವರ್ಷದ ಮಗುವನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನಿಂತಿದ್ದ ಸೊಸೆ ಬಳಿಗೆ ಹೋದ ಅತ್ತೆ ಮತ್ತು ನಾದಿನಿ ಕೈಯಲ್ಲಿ ಹಿಡಿದಿದ್ದ ಮಗುವನ್ನು ತಾಯಿಯಿಂದ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಅಳುತ್ತಿದ್ದ ಇನ್ನೊಂದು ಮಗುವನ್ನು ಪಕ್ಕಕ್ಕೆ ದೂಡಿದ್ದಾರೆ. ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿದ್ದ ಸೊಸೆ ಮೇಲೆ ನಿಷ್ಕರುಣಿಗಳಂತೆ ಹಲ್ಲೆ ನಡೆಸಿದ್ದಾರೆ. ಅಳುತ್ತಿದ್ದ ಮಗುವಿನೊಂದಿಗೆ ಆಕೆಯನ್ನು ನೆಲಕ್ಕೆ ದೂಡಿ ಜೆಸಿಬಿ ಹೋಗಲು ಅನುವು ಮಾಡಿಕೊಡುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ತಿಗಾಗಿ ಸಂಬಂಧವನ್ನೇ ಮರೆತು ಏನೂ ಅರಿಯದ ಮಕ್ಕಳ ಜೊತೆ ಹೀನಾಯವಾಗಿ ವರ್ತಿಸಿರುವ ಮಹಿಳೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: