ಕರ್ನಾಟಕಪ್ರಮುಖ ಸುದ್ದಿ

ಕಾನೂನು ಬಾಹಿರ ಮತ್ತು ಮಾನವ ಹಕ್ಕು ಉಲ್ಲಂಘನೆಯಂತಹ ಪ್ರಕರಣಗಳು ಕಂಡು ಬಂದಲ್ಲಿ ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಿ: ಮೀರಾ ಸಿ.ಸಕ್ಸೇನಾ

ರಾಜ್ಯ(ಉಡುಪಿ)ಜೂ.21:-  ಸಮಾಜದಲ್ಲಿ ಇಂದಿಗೂ ಸಹ ಬಾಲ್ಯ ವಿವಾಹ, ಜೀತ ಪದ್ದತಿ ನಡೆಯುತ್ತಿದ್ದರೂ  ಸಾರ್ವಜನಿಕರು ಸುಮ್ಮನಿರುವುದು ಸರಿಯಲ್ಲ, ಈ ರೀತಿಯ ಯಾವುದೇ ಕಾನೂನು ಬಾಹಿರ ಮತ್ತು ಮಾನವ ಹಕ್ಕು ಉಲ್ಲಂಘನೆಯಂತಹ ಪ್ರಕರಣಗಳು ಕಂಡು ಬಂದಲ್ಲಿ ಆಯೋಗದ ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ, ಗ್ರಾಮೀಣಾಭಿವೃದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಗ್ಲೋಬಲ್ ಕನ್ಸರ್ನ್ ಇಂಡಿಯಾ ಹಾಗೂ ಅಕಾಡೆಮಿ ಆಫ್ ಗಾಂಧಿಯನ್ ಸ್ಟಡೀಸ್ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ನಡೆದ ಮಾನವ ಹಕ್ಕು, ಲಿಂಗತ್ವ ಸಮಾನತೆ ಮತ್ತು ಮಾನವ ಕಳ್ಳ ಸಾಗಾಣಿಕೆ , ಮಾನವ ಮತ್ತು ಪರಿಸರ ಹಕ್ಕು ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಕಂಡುಬಂದಲ್ಲಿ ನೇರವಾಗಿ ಮಾನವ ಹಕ್ಕು ಆಯೋಗದ ಟೋಲ್ ಫ್ರೀ ಸಂಖ್ಯೆ 180042523333 ಗೆ ದೂರು ನೀಡಿ. ದೂರು ನೀಡಿದ ವ್ಯಕ್ತಿಗೆ ಯಾವುದೇ ತೊಂದರೆ ಇಲ್ಲ, ಸಂಬಂಧಪಟ್ಟ ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುವುದು, ದೂರಿನಲ್ಲಿ ಸತ್ಯಾಂಶ ಇದ್ದಲ್ಲಿ ಪ್ರಕರಣ ದಾಖಲಿಸಲಾಗುವುದು ಇಲ್ಲದಿದ್ದಲ್ಲಿ ಪ್ರಕರಣವನ್ನು ಕೈಬಿಡಲಾಗುವುದು, ಮಾಹಿತಿದಾರರ ಹೆಸರನ್ನು ಗೋಪ್ಯವಾಗಿಡಲಾಗುವುದು. ರಾಜ್ಯದಲ್ಲಿ ಆಯೋಗ ರಚೆನೆಯಾದ ನಂತರ ಇದುವರೆಗೂ 66991 ದೂರುಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 58740 ವಿಲೇವಾರಿ ಮಾಡಲಾಗಿದೆ ಸುಮಾರು8000 ಪ್ರಕರಣಗಳು ಬಾಕಿ ಇವೆ. ಉಡುಪಿ ಜಿಲ್ಲೆಯಲ್ಲಿ 1131 ದೂರು ಸ್ವೀಕರಿಸಿ 1009 ವಿಲೇವಾರಿ ಮಾಡಿದ್ದು, 122 ಬಾಕಿ ಇವೆ. ಆಯೋಗ ಇದುವರೆವಿಗೆ ಸ್ವಯಂ ಪ್ರೇರಿತವಾಗಿ ಸುಮಾರು 9000 ದೂರುಗಳನ್ನು ದಾಖಲಿಸಿದೆ. ಆಯೋಗದ ಹೆಸರು ಬಳಸಿಕೊಂಡು ಕೆಲವು ವ್ಯಕ್ತಿಗಳು  ವಂಚನೆ, ಬೆದರಿಕೆ ಯಂತಹ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದು, ಅಂತಹವರು ವಿರುದ್ದ ದೂರು ನೀಡಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ವಾಹನಗಳ ಮೇಲೆ ಆಯೋಗದ ಹೆಸರು ಹಾಕಿಸಿಕೊಂಡು ಸಂಚರಿಸುವವರ ಕುರಿತು ಪರಿಶೀಲನೆ ನಡೆಸಿ ದೂರು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: