ಕರ್ನಾಟಕ

ಕುಡಿಯುವ ನೀರಿಗೆ ಒತ್ತಾಯಿಸಿ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

ರಾಜ್ಯ(ತುಮಕೂರು)ಜೂ.21:- ಕುಡಿಯುವ ನೀರಿಗಾಗಿ ಗ್ರಾ.ಪಂ. ಕಛೇರಿ ಮುಂದೆ ನೀರೆಯರು ಖಾಲಿ ಬಿಂದಿಗೆಯೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಹುಳಿಯಾರಿನ ಬರಕನಹಾಳ್‌ನಲ್ಲಿ ನಡೆದಿದೆ.
ಬರಕನಹಾಳ್ ಗ್ರಾ.ಪಂ. ವ್ಯಾಪ್ತಿಯ ಬಾಲದೇವರಹಟ್ಟಿಯ ನಿವಾಸಿಗಳು ಪ್ರತಿಭಟನೆ ಮಾಡಿದ್ದು, 3 ತಿಂಗಳಿಂದ ಈ ಊರಿಗೆ ನೀರಿನ ಸಮಸ್ಯೆ ಇದೆಯಂತೆ. ಗ್ರಾ.ಪಂ. ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಸ್ಪಂದಿಸಿಲ್ಲ. ಹಾಗಾಗಿ ಊರಿನ ಮಹಿಳೆಯರೊಂದಿಗೆ ಪ್ರತಿಭಟನೆ ಮಾಡಲು ಮುಂದಾದರು. ಬಾಲದೇವರಹಟ್ಟಿಗೆ ಹೇಮಾನಾಯ್ಕನ ತಾಂಡ್ಯದಿಂದ ನೀರು ಪೂರೈಸಲಾಗುತ್ತಿತ್ತು. ತೀವ್ರ ಬರದ ಹಿನ್ನೆಲೆಯಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿ 3 ತಿಂಗಳಿಂದ ನೀರಿನ ಸಮಸ್ಯೆ ಸೃಷ್ಠಿಯಾಗಿದೆ. ಕಳೆದ 15 ದಿನಗಳ ಹಿಂದೆ ಮೋಟರ್ ಸಹ ಸುಟ್ಟು ನೀರಿನ ಸಮಸ್ಯೆ ಉಲ್ಬಣಿಸಿದೆ. ಪರಿಣಾಮ 3-4 ಕಿ.ಮೀ. ದೂರದಿಂದ ಅಕ್ಕಪಕ್ಕದ ತೋಟದ ಮಾಲೀಕರನ್ನು ಕಾಡಿ ಬೇಡಿ ನೀರು ತರುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾನಿರತರು ತಮ್ಮ ಅಳಲು ತೋಡಿಕೊಂ‌ಡಿದ್ದಾರೆ.
ಬಾಲದೇವರಹಟ್ಟಿಯ ನೀರಿನ ಸಮಸ್ಯೆ ಸೃಷ್ಟಿಗೆ ನೀರು ಘಂಟಿ ಸಹ ಕಾರಣರಾಗಿದ್ದಾರೆ. ಕರೆಂಟ್ ಇದ್ದಾಗ ನೀರು ಲೋಡ್ ಮಾಡದೆ ದಾಳಿಂಬೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ನೀರುಘಂಟಿಯನ್ನು ಸಹ ಬದಲಾಯಿಸಬೇಕು. ತಕ್ಷಣ ಮೋಟರ್ ದುರಸ್ತಿಗೊಳಿಸಿ  ಕೊಳವೆ ಬಾವಿಗೆ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾ.ಪಂ. ಕಾರ್ಯದರ್ಶಿ ಶಿವಣ್ಣ ಮಾತನಾಡಿ, ಇನ್ನೆರಡು ದಿನಗಳಲ್ಲಿ ಕೊಳವೆ ಬಾವಿ ಅಳವಡಿಸುವುದಾಗಿಯೂ ನಂತರ ಮೋಟರ್ ರಿಪೇರಿ ಮಾಡಿಸಿ ಕೊಳವೆ ಬಾವಿಗೆ ಬಿಟ್ಟು ಸಮರ್ಪಕವಾಗಿ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಅಲ್ಲದೆ ನೀರುಘಂಟಿ ಬದಲಾಯಿಸುವ ವಿಚಾರವಾಗಿ ಸಾಮಾನ್ಯ ಸಭೆಯ ಚರ್ಚೆಗಿಟ್ಟು ಸದಸ್ಯರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಪ್ರತಿಭಟನಾ ನಿರತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು. ಬಾಲದೇವರಹಟ್ಟಿಯ ನೀರಿನ ಸಮಸ್ಯೆ ವಿಚಾರವಾಗಿ ಗ್ರಾ.ಪಂ. ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದ್ದರೂ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈಗ ಮೋಟರ್ ಕೆಟ್ಟು ಹನಿ ನೀರಿಗೂ ಪರದಾಡುತ್ತಿದ್ದರೂ ಮೋಟರ್ ರಿಪೇರಿ ಮಾಡಿಸಿಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳನ್ನು ಧರಣಿ ಮಾಡಲು  ಸೂಚಿಸಿದ್ದು ಗ್ರಾ.ಪಂ. ಅಧಿಕಾರಿ ಸ್ಪಂದಿಸಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾ.ಪಂ. ಸದಸ್ಯ ದೇವರಾಜು ತಿಳಿಸಿದ್ದಾರೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: