ಕರ್ನಾಟಕ

ಮಕ್ಕಳನ್ನು ಶಾಲೆಗೆ ಸೇರಿಸಲು `ಮರಳಿ ಬಾ ಶಾಲೆಗೆ` ಯೋಜನೆ ಆದರೆ ಶಿಕ್ಷಕರನ್ನು ಶಾಲೆಗೆ ಕರೆಯಲು..?

ರಾಜ್ಯ(ರಾಯಚೂರು).ಜೂ.21:- ಮಕ್ಕಳನ್ನು ಶಾಲೆಗೆ ಸೇರಿಸಲು `ಮರಳಿ ಬಾ ಶಾಲೆಗೆ` ಯೋಜನೆಯಿದೆ. ಆದರೆ, ಸಾವಿರಗಟ್ಟಲೆ ವೇತನ ಪಡೆಯುವ ಶಿಕ್ಷಕರು ಶಾಲೆಗೆ ಬರಲು ಸರ್ಕಾರ ಯಾವ ಯೋಜನೆ ರೂಪಿಸಬೇಕು? ತಾಲೂಕಿನ ಮಂಡಲಗೇರಾ ಗ್ರಾಮದಲ್ಲಿ ನೂರಾರು ಮಕ್ಕಳು ಶಾಲೆಗೆ ಬಂದರೂ, ಶಿಕ್ಷಕರು ಬಾರದ ಕಾರಣ ಬೀಗ ಹಾಕಿದ ಕೋಣೆಯ ಮುಂದೆ ಕಾದು ಕುಳಿತು ಸುಸ್ತಾಗಿ ಮತ್ತೆ ಮನೆಗೆ ಮರಳಿದ ಘಟನೆ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಯಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಆದರೆ, ಇಂದು ಯಾವೊಬ್ಬ ಶಿಕ್ಷಕ ಶಾಲೆಗೆ ಬಾರದಿರುವುದರಿಂದ ಮಕ್ಕಳು ಶಾಲೆ ಮುಂದೆ ಕಾದು ಕಾದು ಸುಸ್ತಾದರು.
ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಸರ್ಕಾರ ಏನೆಲ್ಲಾ ಯೋಜನೆಗಳು ರೂಪಿಸುತ್ತಿದ್ದರೂ, ಕೆಲ ಶಿಕ್ಷಕರ ವರ್ತನೆ ಉದ್ದೇಶಿತ ಯೋಜನೆ ವಿಫಲಗೊಳ್ಳುವಂತೆ ಮಾಡಿದೆ. ಗ್ರಾಮೀಣ ಪ್ರದೇಶದ ಶಾಲೆಗಳೆಂದರೆ ಕೆಲ ಶಿಕ್ಷಕರಿಗೆ ಕೇವಲ ವೇತನಕ್ಕೆ ಸೀಮಿತ ಎನ್ನುವಂತಾಗಿದೆ. ಶಾಲೆಗೆ ನಿಯಮಬದ್ಧವಾಗಿ ಹಾಜರಾಗುವ ಮತ್ತು ಪಾಠ ಪ್ರವಚನೆ ನಡೆಸುವ ಬಗ್ಗೆ ಯಾವುದೇ ಸಮರ್ಪಕವಾಗಿ ಗಮನ ಹರಿಸದ ಸಮಸ್ಯೆ ಒಂದೆಡೆಯಾದರೆ, ಮತೊಂದೆಡೆ ಶಾಲೆಗಳಿಗೆ ಅನಧಿಕೃತ ಗೈರು ಹಾಜರಾಗುವ ಪರಿಪಾಠ ವ್ಯಾಪಕವಾಗಿದೆ. ಶಿಕ್ಷಕರ ಮಧ್ಯೆ ಒಳ ಒಪ್ಪಂದ ಮಾಡಿಕೊಂಡು ಸರದಿಯಾನುಸಾರ ಅನಧಿಕೃತ ಗೈರು ಹಾಜರಾಗಿ ಗ್ರಾಮೀಣ ಶಿಕ್ಷಣ ಹಳ್ಳ ಹಿಡಿಯುವಂತೆ ಮಾಡಲಾಗುತ್ತಿದೆ ಎನ್ನುವುದಕ್ಕೆ ಮಂಡಲಗೇರಾ ಗ್ರಾಮದ ಇಂದಿನ ಈ ಘಟನೆ ನಿದರ್ಶನವಾಗಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರಪ್ಪ ಶಿವಂಗಿ ಅವರನ್ನು ಕೇಳಿದಾಗ ಒಟ್ಟು ನಾಲ್ವರು ಶಿಕ್ಷಕರನ್ನು ಪ್ರಾಥಮಿಕ ಶಾಲೆಗೆ ನೇಮಿಸಲಾಗಿದೆ. ಓರ್ವ ಶಿಕ್ಷಕರು ಸಿಆರ್‌ಸಿ ಬಳಿ ಕಚೇರಿಗೆ ಬಂದಿದ್ದರು, ಇನ್ನೊಬ್ಬರು ವೈದ್ಯಕೀಯ ರಜೆಯಲ್ಲಿದ್ದಾರೆ, ಇನ್ನಿಬ್ಬರು ಶಾಲೆಗೆ ಹೋಗಿರುವುದಾಗಿ ಹೇಳಿದರು.
ಆದರೆ, ಮಕ್ಕಳು ಮುಚ್ಚಿದ ತರಗತಿಯ ಕೊಠಡಿ ಮುಂದೆ ಸಾಲುಗಟ್ಟಿ ಕುಳಿತಿರುವ ಬಗ್ಗೆ ಕೇಳಿದಾಗ ಸಮಯಕ್ಕಿಂತ ಮುಂಚೆ ಮಕ್ಕಳು ಶಾಲೆಗೆ ಹೋಗಿರಬಹುದೆಂದು ಸಮಜಾಯಿಶಿ ನೀಡಿದರು. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಿಆರ್‌ಸಿ ಅವರನ್ನು ಕಳುಹಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: