ಕರ್ನಾಟಕಪ್ರಮುಖ ಸುದ್ದಿ

ಮುಂದಿನ ಅಧಿಕಾರದ ಚುಕ್ಕಾಣಿ ಕುರಿತು ವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ : ಮುಂದೆ ನಾವೇ ಅಧಿಕಾರಕ್ಕೆ ಬರುವುದು ಎಂದಬ್ಬರಿಸಿದರು ಸಿದ್ದರಾಮಯ್ಯ

ರಾಜ್ಯ(ಬೆಂಗಳೂರು)ಜೂ.21:-  ಮುಂದೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವುದು ಯಾರು ಎಂಬ ವಿಚಾರ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಕಾರಣವಾಗಿ ಆಡಳಿತ ಹಾಗೂ ವಿರೋಧಿ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ಯುದ್ದ, ವ್ಯಂಗ್ಯಭರಿತ ಮಾತುಗಳಿಗೆ ಕಾರಣವಾಗಿದ್ದಲ್ಲದೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಮುಂದೆ ನಾವೇ ಅಧಿಕಾರಕ್ಕೆ ಬರುವುದು ಎಂದು ಜೋರು ಧ್ವನಿಯಲ್ಲಿ ಅಬ್ಬರಿಸಿ ಅಕ್ಷರಶಃ ವಿರೋಧ ಪಕ್ಷಗಳ ಮೇಲೆ ಮುಗಿಬಿದ್ದರು.
ವಿವಿಧ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆ ಸಂದರ್ಭದಲ್ಲಿ ಜಿಎಸ್‌ಟಿ ಮಂಡಳಿ ಸಭೆಗೆ ಸಚಿವ ಕೃಷ್ಣಬೈರೇಗೌಡ 15 ಬಾರಿ ಹೋಗಿ ಆರ್ಥಿಕ ವಿಚಾರದಲ್ಲಿ ನನಗಿಂತ ಮುಂದೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದಾಗ ವಿರೋಧ ಪಕ್ಷದ ಸದಸ್ಯರೊಬ್ಬರು ಅವರನ್ನೇ ಹಣಕಾಸು ಮಂತ್ರಿ ಮಾಡಿ ವ್ಯಂಗ್ಯವಾಗಿ ಹೇಳಿದಾಗ, ಮಾಡಿಯೇ ಮಾಡುತ್ತೇವೆ. ಮುಂದೆ ನಾವೇ ಅಧಿಕಾರಕ್ಕೆ ಬರುವುದು ಎಂದು ಹೇಳಿದಾಗ ಈ ಕುರಿತ ಚರ್ಚೆ ಕಾವೇರಿತು. ಬಿಜೆಪಿಯವರು ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಈಗಾಗಲೇ 150 ಸೀಟು ನಮ್ಮ ಜೇಬಿನಲ್ಲಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮತ ಹಾಕುವವರನ್ನು ಸುಲಭವಾಗಿ ತೆಗೆದುಕೊಳ್ಳುತ್ತಿದ್ದಾರೆ. 150 ಸೀಟು ಇವರ ಜೇಬಿನಲ್ಲಿದೆಯೇ ಎಂದು ತಾವು ಧರಿಸಿದ ಜುಬ್ಬಾದ ಜೇಬಿಗೆ ಕೈಯಿಟ್ಟುಕೊಂಡು ಹಿಂದಕ್ಕೂ-ಮುಂದಕ್ಕೂ ವಾಲಾಡಿ ಒಂದು ರೀತಿ ನರ್ತನ ಮಾಡಿದ ಸಿದ್ದರಾಮಯ್ಯ ಅವರು, ನೀವು ಏನೇ ಹೇಳಿ, ಮುಂದೆ ನಾವೇ ಅಧಿಕಾರಕ್ಕೆ ಬರುವುದು. ಇದು ಸ್ಪಷ್ಟ ಎಂದು ಅಬ್ಬರಿಸಿದರು. ಮುಖ್ಯಮಂತ್ರಿಗಳ ಮಾತಿಗೆ ಪ್ರತಿರೋಧವೊಡ್ಡಿದ ವಿಪಕ್ಷ ನಾಯಕ ಜಗದೀಶ್‌ಶೆಟ್ಟರ್, ಇಷ್ಟೊಂದು ಭ್ರಮೆ ಇಟ್ಟುಕೊಳ್ಳಬೇಡಿ. ಮುಂದೆ ಅಧಿಕಾರ ನಮ್ಮದೇ. ಚುನಾವಣೆ ಬರಲಿ, ಎಲ್ಲವೂ ಗೊತ್ತಾಗುತ್ತದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಆಗ ಮತ್ತೆ ಏರಿದ ಧ್ವನಿಯಲ್ಲಿ ಓಹೋ, 150 ಸೀಟು ಜೇಬಿನಲ್ಲಿದೆಯಾ, ಮಿಷನ್ ನೂರೈವತ್ತಾ ಎಂದು ಮತ್ತೆ ಜೇಬಿನಲ್ಲಿ ಕೈಯಿಟ್ಟುಕೊಂಡು ಒಂದು ರೀತಿ ನರ್ತನ ಮಾಡುತ್ತಲೇ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ಏನಾಯಿತು ಎಂಬುದು ಗೊತ್ತಿದೆಯೆಲ್ಲಾ. ಸಾಮಾನ್ಯವಾಗಿ 4 ವರ್ಷ ಆಡಳಿತ ಮಾಡಿದಾಗ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಉಪಚುನಾವಣೆಯಲ್ಲಿ ಆದದ್ದೇನು? ಇವರ ಪಕ್ಷದ ಅಧ್ಯಕ್ಷರು ನಾವು ಗೆದ್ದೇ ಬಿಟ್ಟೆವು, ವಿಜಯೋತ್ಸವಕ್ಕೆ ಬರುತ್ತೇವೆ ಎಂದು ಹೇಳಿದ್ದರು. ಉಪಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಹೇಳಿದ್ದರು. ಹಲವು ಬಾರಿ ದಿಕ್ಸೂಚಿ ಎಂಬ ಪದವನ್ನು ಉದ್ಘರಿಸಿದ ಮುಖ್ಯಮಂತ್ರಿ, ಭ್ರಮೆ ಬೇಡ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.
ಮಧ್ಯ ಪ್ರವೇಶಿಸಿದ ಜೆಡಿಎಸ್‌ನ ಸಾ.ರಾ. ಮಹೇಶ್, ಈ ಚುನಾವಣೆಯಲ್ಲಿ ನಾವು ನಿಮ್ಮ ಜತೆಗಿದ್ದೆವು ಎಂಬುದನ್ನು ಹೇಳಿ ಬಿಡಿ ಎಂದರು.  ಇದಕ್ಕೆ ದನಿಗೂಡಿಸಿದ ಕೋನರೆಡ್ಡಿ, ಏನೇ ಆಗಲಿ, ನಾವಿಲ್ಲದೆ ಯಾರೂ ಅಧಿಕಾರಕ್ಕೇರಲು ಸಾಧ್ಯವಿಲ್ಲ ಎಂದು ಮಾತಿನ ಬಾಣ ಬಿಟ್ಟರು. ಉಪಚುನಾವಣೆಯಲ್ಲಿ ಯಾವ ರೀತಿ ಗೆದ್ದಿದ್ದೀರಿ ಎಂಬುದು ನಮಗೆ ಗೊತ್ತಿದೆ. ಹಣದ ಹೊಳೆ ಹರಿಸುತ್ತೀರಿ ಎಂದು ಬಿಜೆಪಿಯ ಸಿ.ಟಿ. ರವಿ, ಶಂಕರ್ ಹೇಳಿದಾಗ, ಸಿಟ್ಟಿಗೆದ್ದಂತೆ ವರ್ತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಏರಿದ ಧ್ವನಿಯಲ್ಲಿ ನೀವೇನು ಹರಿಶ್ಚಂದ್ರರಾ, ನೀವೇನು ಹಣದ ಹೊಳೆ ಹರಿಸಿಲ್ವಾ, ಆಪರೇಷನ್ ಕಮಲ ಮಾಡಿದ್ದು ನೀವು, ಹಣದ ಹೊಳೆ, ಜಾತಿ ರಾಜಕಾರಣ, ಕೋಮುವಾದ ಮಾಡಿದ್ದು ನೀವು. ನಿಮಗೆ ಯಾವುದರ ಬಗ್ಗೆಯೂ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಆಗ ಈ ಹಂತದಲ್ಲಿ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು.  ಬಿಜೆಪಿಯ ಬಸವರಾಜ ಬೊಮ್ಮಾಯಿ, ಭ್ರಮೆ ಯಾರದ್ದು ಎಂಬುದು ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಹೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿರವರೆ ನೀವು ಕೋಮುವಾದಿಯಲ್ಲ ಎಂಬುದು ನನಗೆ ಗೊತ್ತು. ನೀವು ನಮ್ಮಿಂದ ಹೋದವರು. ಯಾರು ಏನೇ ಹೇಳಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಲಿದೆ. ಕೃಷ್ಣಭೈರೇಗೌಡರವನ್ನು ಹಣಕಾಸು ಮಂತ್ರಿ ಮಾಡುತ್ತೇವೆ ಎಂದರು.
ಆಗ ಜೆಡಿಎಸ್‌ನ ಕೋನರೆಡ್ಡಿ ಯಾರೇ ಅಧಿಕಾರಕ್ಕೆ ಬರಲಿ, ರೈತರಿಗೆ ಒಳ್ಳೆಯದನ್ನು ಮಾಡಿ ಎಂದರು.  ನಾವು ರೈತರಿಗೆ ಒಳ್ಳೆಯದನ್ನೇ ಮಾಡಿದ್ದೇವೆ. ಗೋಲಿಬಾರ್ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಗುಂಡೂರಾವ್ ಅಧಿಕಾರದಲ್ಲಿದ್ದಾಗಲೂ ರೈತರ ಮೇಲೆ ಗೋಲಿಬಾರ್ ನಡೆದಿತ್ತಲ್ಲ. ಅದನ್ನು ನಾವು ಮರೆತಿಲ್ಲ ಎಂದು ಶೆಟ್ಟರ್ ಹೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಳೆಯದನ್ನೇ ಹೇಳಬೇಡ್ರಿ, ಈಗಿನದನ್ನು ಹೇಳಿ, ಗುಂಡೂರಾವ್‌ ಹಸಿರ ಶಾಲು ಧರಿಸಿರಲಿಲ್ಲ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗೋಲಿಬಾರ್‌ ನಡೆಸಿರಲಿಲ್ಲ ಎಂದು ಜೋರು ಧನಿಯಲ್ಲಿ ಮಾತನಾಡಿದರು.

ಆಗ ಮತ್ತೆ ಸಚಿವ ಕೃಷ್ಣಭೈರೇಗೌಡ-ಜಗದೀಶ್‌ಶೆಟ್ಟರ್ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಹೆಚ್ಚಾಗಲು ಕಾರಣವಾದರು.  ಸದನ ಹಳಿ ತಪ್ಪುತ್ತಿರುವುದನ್ನು ಗಮನಿಸಿದ ರೈತ ಸಂಘದ ಪುಟ್ಟಣಯ್ಯ, ಹಳೆಯದನ್ನೆಲ್ಲಾ ಏಕೆ ಮಾತನಾಡುತ್ತೀರಿ, ನಡೆಯಬೇಕಾಗಿರುವುದನ್ನು ಮಾತನಾಡಿ ಎಂದು ಹೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡುತ್ತೇನೆ. ಸತ್ಯ ಹೇಳಿದರೆ ಇವರಿಗೆ ಸಿಟ್ಟು ಬರುತ್ತದೆ ಎಂದರು.

ಆಗ ಬಿಜೆಪಿಯ ಸಿ.ಟಿ. ರವಿ, ಎಷ್ಟು ಊದುತ್ತೀರೋ ಊದಿ, ಊದಿದ ಬಲೂನ್ ಢಂ ಅನ್ನತ್ತದೇ ಎಂದು ಹೇಳಿದ್ದು ಸದನದಲ್ಲಿ ನಗೆಗೆ ಕಾರಣವಾಗಿ ಈ ಕುರಿತ ಬಿಸಿ ಚರ್ಚೆ ಅಂತ್ಯಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ವಿವಿಧ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡುವ ಮನಸ್ಥಿತಿಗೆ ಮರಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: