ಕರ್ನಾಟಕ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ

ಬೆಂಗಳೂರು,ಜೂ.21- ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರೇ ಸಿಬ್ಬಂದಿ ವರ್ಗಾವಣೆ  ನಿಯಂತ್ರಣ) ತಿದ್ದುಪಡಿ ವಿಧೇಯಕವನ್ನು ಬುಧವಾರ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಕರ್ನಾಟಕ ವೈದ್ಯಕೀಯ  ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ತಿದ್ದುಪಡಿ ವಿಧೇಯಕವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮಂಡಿಸಿದರು. ವಿಧಾನಸಭೆಯಿಂದ ಅಂಗೀಕೃತಗೊಂಡಿದ್ದ ವಿಧೇಯಕವನ್ನು ಮೇಲ್ಮನೆಯಲ್ಲಿ ಅಂಗೀಕರಿಸಲಾಗಿದೆ.

1,300 ತಜ್ಞ ವೈದ್ಯರ ಕೊರತೆ: ರಾಜ್ಯದಲ್ಲಿ 1,300 ತಜ್ಞ ವೈದ್ಯರ ಕೊರತೆಯಿದ್ದು, ಕೆಪಿಎಸ್ಸಿ ಮೂಲಕ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನಿಸಿ 1.25 ಲಕ್ಷ ರೂ. ವೇತನವನ್ನು ನಿಗದಿಪಡಿಸಲಾಗಿತ್ತು. ಆದರೆ ಇದಕ್ಕೆ ಯಾರು ಮುಂದೆ ಬರಲಿಲ್ಲ. ಹೀಗಾಗಿ ಓಪನ್ ಬಿಡ್ ಮೂಲಕ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ತಜ್ಞ ವೈದ್ಯರು ಮುಂದೆ ಬಂದರೆ ಅವರನ್ನು ನಾವು ನೇಮಕ ಮಾಡಿಕೊಳ್ಳಲು ಸಿದ್ಧರಿದ್ದೇವೆ. ನಮಗೆ ಹಣ ಮುಖ್ಯವಲ್ಲ. ಜನ ಮುಖ್ಯ. ಸಾರ್ವಜಿನಕ ಹಿತ ಬಲಿ‌ಕೊಡಲು ನಾವು ತಯಾರಿಲ್ಲ ಎಂದಿದ್ದಾರೆ.

ಉಪಕುಲಪತಿಗಳ ವಯೋಮಿತಿ ಹೆಚ್ಚಳ ವ್ಯಾಪಕ ವಿರೋಧ: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ತಿದ್ದುಪಡಿ) ವಿಧೇಯಕ ಮಂಡನೆಯ ವೇಳೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ. ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಷಯವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಮಂಡಿಸಿದರು.

ಈ ಸಂದರ್ಭದಲ್ಲಿ ಉಪಕುಲಪತಿಗಳ ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದರು. ಉಪಕುಲಪತಿ ಸ್ಥಾನಕ್ಕೆ 75 ವರ್ಷದವರನ್ನು ನೇಮಿಸಿದರೆ ಅವರು ಇನ್ನೊಬ್ಬರ ಕೈ ಹಿಡಿದು ಓಡಾಡಬೇಕು ಇದು ಸರಿಯಾದ ಕ್ರಮವಲ್ಲ ಎಂದರು.

ವಿವಿಗಳಿಗೆ ಭ್ರಷ್ಟಾಚಾರಿಗಳನ್ನು ಕುಲಪತಿಗಳಾಗಿ ನೇಮಿಸುತ್ತಾರೆ. ಇದಕ್ಕೆ ನಾವು ಒಪ್ಪಲ್ಲ. ವಿವಿಗಳಲ್ಲಿ ನಿವೃತ್ತಿ ಹೆಚ್ಚಿಸೋದು ಸರಿ ಇಲ್ಲ. ೧೮ ವರ್ಷದ ಯುವಕರಿಗೆ ದೇಶ ಕಟ್ಟಲು ಮತದಾನದ ಹಕ್ಕು ನೀಡಲಾಗುತ್ತದೆ. ಹೀಗಿರುವಾಗ ಕುಲಪತಿಗಳ ನಿವೃತ್ತಿ ವಯಸ್ಸು ಹೆಚ್ಚಿಸೋದು ಸರಿ ಇಲ್ಲ. ಯಾರನ್ನೋ ಮನಸ್ಸಿನಲ್ಲಿ ಇಟ್ಟುಕೊಂಡು ಈ ವಿಧೇಯಕ ತಂದಿದ್ದಾರೆ ಎಂದು ಆರೋಪಿಸಿದರು.

ಈ ವಿಧೇಯಕಕ್ಕೆ ಬಿಜೆಪಿ ಕವಟಗಿ ಮಠ್ ಅವರು ಸಹ ವಿರೋಧ ವ್ಯಕ್ತಪಡಿಸಿದರು. ಮಾಜಿ ಕುಲಪತಿಗೆ ಮತ್ತೆ ಕುಲಪತಿ ಅವಕಾಶ ನೀಡುವುದು ಸರಿಯಲ್ಲ. ನಿವೃತ್ತಿ ವಯೋಮಾನವನ್ನು ೬೭ ವರ್ಷದಿಂದ ೭೦ ವರ್ಷಕ್ಕೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ೭೦ ವರ್ಷವಾದವರನ್ನ ಕುಲಪತಿಯಾಗಿ ಏಕೆ ನೇಮಿಸುತ್ತೀರಿ. ಅವರಿಂದ ಏನು ಉಪಯೋಗ? ಎಂದು ಪ್ರಶ್ನಿಸಿದರು.

ವಿವಿಗಳಲ್ಲಿ ಭ್ರಷ್ಟಾಚಾರ ತುಂಬಿದೆ. ಇದಕ್ಕೆ ಸಾಕ್ಷಿಯೆಂಬತೆ ೮ ಉಪಕುಲಪತಿಗಳ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಇಂತ ಸಂದರ್ಭದಲ್ಲಿ ಮತ್ತೆ ವಯಸ್ಸು ಏರಿಕೆ ಮಾಡೋದು ಸರಿಯಲ್ಲ. ಯುವಕರಿಗೆ ಅವಕಾಶ ನೀಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಭಾನುಪ್ರಕಾಶ್, ರಾಮಚಂದ್ರೇಗೌಡ ಅವರಿಂದಲೂ ಈ ಬಗ್ಗೆ ವಿರೋಧ ವ್ಯಕ್ತವಾಯಿತು.

ರಾಜಕಾರಣಿಗಳ ವಯಸ್ಸು ನಿಗದಿಗೊಳಿಸಿ: ಉಪಕುಲಪತಿ ನೇಮಕ ಬಗ್ಗೆ ಮಾತನಾಡಿದ ಉಗ್ರಪ್ಪ ೫೮, ೬೦, ೬೨, ೬೭, ೭೦ ಅಂತ ಏರಿಕೆ ಮಾಡಿ. ಸರ್ಕಾರಿ ಅಧಿಕಾರಿಗಳ ಸೇವೆ ಏರಿಕೆ ಮಾಡಿ. ಅಧಿಕಾರಿಗಳು ಹೇಳಿದಂತೆ ಮಾಡಿ. ಇನ್ಯಾಕೆ ಸಾಯುವವರೆಗೆ ಸೇವೆ ಅಂತ ಮಾಡಿ ಎಂದು ವ್ಯಂಗ್ಯವಾಡಿದರು. ಇದಕ್ಕೆ ಬಿಜೆಪಿಯ ಪುಟ್ಟಸ್ವಾಮಿ ಬೆಂಬಲ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಹಾಗಾದರೆ ರಾಜಕಾರಣಿಗಳ ವಯಸನ್ನು ನಿಗದಿಗೊಳಿಸಿ. ೬೦ ವರ್ಷದ ನಂತರ ರಾಜಕೀಯ ಬೇಡ ಅಂತ ಮಾಡಿ. ಮೊದಲು ಆ ಕಾನೂನು ತನ್ನಿ ಎಂದರು. ಇವರಿಗೆ ಸೋಮಣ್ಣ ಬೆಂಬಲಿಸಿದರು. ಈ ಬಗ್ಗೆ ಬೇವಿನಮರದ ರಾಜಕಾರಣಿಗಳಿಗೆ ವಯಸ್ಸಿನ ಮಿತಿ ಯಾಕೆ ಎಂದು ಪುಟ್ಟಸ್ವಾಮಿ ಪಶ್ನಿಸಿದರು.

ಕೇರಳದ ಕನ್ನಡಿಗರ ರಕ್ಷಣೆ ಮಾಡಿ:

ಕೇರಳದಲ್ಲಿ ಕನ್ನಡಿಗರ ಮೇಲೆ, ಕನ್ನಡ ಭಾಷೆಯ ಮೇಲೆ ದೌರ್ಜನ್ಯವಾಗುತ್ತಿದ್ದು, ಅವರನ್ನು ರಕ್ಷಿಸಿ ಎಂದು ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಸರ್ಕಾರವನ್ನು ಆಗ್ರಹಿಸಿದರು. ಇದಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ರಮೇಶ್ ಕುಮಾರ್, ಕನ್ನಡ ಭಾಷೆಯ ಮೇಲಿನ ದೌರ್ಜನ್ಯಕ್ಕೆ ನಮ್ಮ ವಿರೋಧವಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಅವರೊಂದಿಗೆ ಚರ್ಚಿಸಿ ಕೇರಳದಲ್ಲಿನ ಕನ್ನಡಿಗರನ್ನು ರಕ್ಷಿಸುತ್ತೇವೆ ಎಂದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: