ಕರ್ನಾಟಕಪ್ರಮುಖ ಸುದ್ದಿ

ಸಾರ್ವಜನಿಕರ ಹಣ ಲಪಟಾಯಿಸಿದ ಅಂಚೆ ಮಾಸ್ಟರ್ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ಮಂಡ್ಯ) ಜೂ.21:- ಕೆ.ಆರ್.ಪೇಟೆ ತಾಲೂಕಿನ ಬೈರಾಪುರ ಗ್ರಾಮದ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸಾರ್ವಜನಿಕರು ವಿವಿಧ ಬಗೆಯ ಖಾತೆ ತೆರೆದು ಉಳಿತಾಯ ಮಾಡಿದ್ದ ಸುಮಾರು 10ಲಕ್ಷ ರೂಗಳನ್ನು ದುರುಪಯೋಗಪಡಿಸಿಕೊಂಡು ಎರಡು ತಿಂಗಳಿನಿಂದ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು,  ಹಣ ದುರುಪಯೋಗ ಪಡಿಸಿಕೊಂಡಿರುವ ಪೋಸ್ಟ್ ಮಾಸ್ಟರ್ ಶಂಕರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದುರುಪಯೋಗ ಮಾಡಿರುವ ಹಣವನ್ನು ಠೇವಣಿದಾರರಿಗೆ ಕೊಡಿಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ಹರೀಶ್, ಕೇಶವಮೂರ್ತಿ, ಕಸ್ತೂರಿ ಕನ್ನಡ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ಜೆ.ಎಸ್.ನಾಗೇಶ್, ಅನಿಲ್‍ಕುಮಾರ್, ಶಿವಾನಂದ್, ಬಸವರಾಜು ಮತ್ತಿತರರ ನೇತೃತ್ವದಲ್ಲಿ ಪಟ್ಟಣದ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತರು ಮಾತನಾಡಿ ಗವಿಗೌಡನಕೊಪ್ಪಲಿನ ನಂಜಮ್ಮ ಅವರ ಉಳಿತಾಯ ಖಾತೆಯಲ್ಲಿದ್ದ 31000 ಹಣವನ್ನು ಎರಡು ಹಣ ಹಿಂಪಡೆಯುವ ಖಾಲಿ ರಶೀದಿಗೆ ಸಹಿ ಪಡೆದು ಕೇವಲ 10ಸಾವಿರ ಕೊಟ್ಟು ಉಳಿದ 21ಸಾವಿರ ರೂ ಹಣವನ್ನು ನೀಡಿಲ್ಲ ಎನ್ನಲಾಗುತ್ತಿದೆ. ದೀಕ್ಷಿತಾ ಎಂಬ ಹುಡುಗಿಯ ಹೆಸರಿನಲ್ಲಿ 20000 ಹಣವನ್ನು ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಜಮಾ ಮಾಡಲು ಪೋಷಕರು ಹಣ ನೀಡಿದ್ದಾರೆ. ಆದರೆ ಕೇವಲ 6500 ಖಾತೆಯಲ್ಲಿದೆ, ಉಳಿದ ಹಣ ನುಂಗಿ ಹಾಕಿದ್ದಾರೆ. ಪ್ರತಿ ತಿಂಗಳು 100 ರಂತೆ ಕಟ್ಟಿದ್ದ ಆರ್‍ಡಿ ಮೆಚ್ಯುರಿಟಿ ಹೊಂದಿದ್ದು ಹಣ ಮರುಪಾವತಿ ಮಾಡಬೇಕಿದ ಪೋಸ್ಟ್ ಮಾಸ್ಟರ್ ಅವರಿಂದ ಸಹಿ ಹಾಕಿಸಿಕೊಂಡು 7300 ಹಣ ಪಡೆದು ಇದುವರೆಗೂ ಹಣ ನೀಡದೆ ಸತಾಯಿಸಿದ್ದಾನೆ ಎಂದು ದೂರಿದರು. ಸುಮಾರು 10 ಲಕ್ಷಕ್ಕೂ ಅಧಿಕ ಠೇವಣಿದಾರರ ಹಣ ದುರುಪಯೋಗ ಮಾಡಿಕೊಂಡ ಪೋಸ್ಟ್ ಮಾಸ್ಟರ್ ಶಂಕರ್ ಕಳೆದ 2 ತಿಂಗಳಿಂದ ಅಂಚೆ ಕಚೇರಿಗೆ ಕೆಲಸಕ್ಕೆ ಆಗಮಿಸದಿದ್ದರೂ, ಆತನ ವಿರುದ್ಧ ಶಿಸ್ತು ಕ್ರಮವಾಗಲಿ ಅಥವಾ ಹಣ ದುರುಪಯೋಗ ಮಾಡಿರುವ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸದೆ ಅಂಚೆ ಇಲಾಖೆಯ ಮೇಲಧಿಕಾರಿಗಳು ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಪ್ರಧಾನ ಅಂಚೆ ಕಚೇರಿ ವ್ಯವಸ್ಥಾಪಕ ದಿನೇಶ್ ಮಾತನಾಡಿ, ಹಣ ದುರುಪಯೋಗ ಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಭೈರಾಪುರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶಂಕರ್ ಗೆ ಈಗಾಗಲೇ ಗೈರು ಹಾಜರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಶ್ರೀರಂಗಪಟ್ಟಣ ವಿಭಾಗ ಅಂಚೆ ಕಚೇರಿಯ ಅಧೀಕ್ಷಕರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅಂಚೆ ಕಚೇರಿಯಲ್ಲಿ ಸಾಕಷ್ಟು ಲೋಪವಾಗಿರುವುದು ಕಂಡುಬರುತ್ತಿದೆ ಇನ್ನೂ ಕೂಡ ತನಿಖೆ ಮುಂದುವರಿದಿದೆ. ಉದ್ದೇಶಪೂರ್ವಕವಾಗಿ ಹಣ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: