ಕರ್ನಾಟಕ

ವೃದ್ಧ ಒಂಟಿ ಮಹಿಳೆಯನ್ನು ಕೊಲೆಗೈದ ಪ್ರಕರಣ : ಆರೋಪಿಯ ಸುಳಿವು ನೀಡಿದ ಚಪ್ಪಲಿ

ರಾಜ್ಯ,(ಬೆಂಗಳೂರು)ಜೂ.21:-  ಹಣದ ಆಸೆಗೆ ಗುಜರಿ ಅಂಗಡಿ ನಡೆಸುತ್ತಿದ್ದ ವೃದ್ಧ ಒಂಟಿ ಮಹಿಳೆಯನ್ನು ಕೊಲೆಗೈದ ಪ್ರಕರಣವನ್ನು ಕೇವಲ ಚಪ್ಪಲಿಯೊಂದರ ಆಧಾರದಲ್ಲಿ ಬಂಧಿಸುವ ಮೂಲಕ ಆಡುಗೋಡಿ ಪೊಲೀಸರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ಬಿದ್ದಿದ್ದ ಚಪ್ಪಲಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಸರಿಗೆ ಅದರ ಮುಂಭಾಗದಲ್ಲಿ ಕೆಲವೊಂದು ವೆಲ್ಡಿಂಗ್‌ನಿಂದ ಆಗುವ ರಂಧ್ರಗಳಿರುವುದು ಪತ್ತೆಯಾಗಿದೆ. ತಕ್ಷಣ ಅವರು ನೇರವಾಗಿ ಆರೋಪಿಯ ಮನೆಬಾಗಿಲಿಗೆ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನೀಲಸಂದ್ರದ ಮುನಿಗೌಡ ಗಾರ್ಡನ್‌ನ ಸಯ್ಯದ್ ನದೀಮ್ (22)  ನನ್ನು ಬಂಧಿಸಲಾಗಿದೆ.  ಥ್ರಿಲ್ಲರ್ ಸಿನಿಮಾಗಳನ್ನು ನೆನಪಿಸುವ ಈ ಘಟನೆಯನ್ನು  ವಾಸ್ತವದಲ್ಲೂ ಪೊಲೀಸರು ಮಾಡಿ ತೋರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜೂನ್ 15ರಂದು ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಮತಾನಗರದಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದ ಗಜಲಕ್ಷ್ಮೀ (65) ಅವರ ಕೊಲೆಯಾಗಿತ್ತು. ಗಜಲಕ್ಷ್ಮೀ ಅವರ ಗಂಡ ಮತ್ತು ಮಗ ಈ ಹಿಂದೆಯೇ ಸಾವನ್ನಪ್ಪಿದ್ದರು. ಅವರು ತಮ್ಮ ಸೊಸೆ ಕಲಾ ಹಾಗೂ ಮೊಮ್ಮಕ್ಕಳೊಂದಿಗೆ ನಗರದ ನೀಲಸಂದ್ರದಲ್ಲಿ ವಾಸಿಸುತ್ತಿದ್ದರು. ಗುಜರಿ ಅಂಗಡಿ ಇಟ್ಟುಕೊಂಡಿದ್ದ ಅವರು ರಾತ್ರಿ ಅದೇ ಅಂಗಡಿಯಲ್ಲಿ ಒಬ್ಬಂಟಿಯಾಗಿ ಮಲಗುತ್ತಿದ್ದರು. ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಆಡುಗೋಡಿ ಪೊಲೀಸರು, ಘಟನಾ ಸ್ಥಳವನ್ನು ಬೆರಳಚ್ಚು ಹಾಗೂ ಶ್ವಾನ ದಳದ ಸಿಬ್ಬಂದಿಯಿಂದ ಪರಿಶೀಲನೆ ನಡೆಸಿದ್ದರು. ಆಗ ಅಲ್ಲಿ ಒಂದು ಜೊತೆ ರಕ್ತಸಿಕ್ತ ಚಪ್ಪಲಿ ದೊರೆತಿತ್ತು. ಮೃತದ ಸಂಬಂಧಿಕರಿಗೆ ಅದನ್ನು ತೋರಿಸಿದಾಗ ಯಾರೂ  ಅದು ತಮ್ಮದಲ್ಲ ಎಂದು ತಿಳಿಸಿದ್ದರು. ಚಪ್ಪಲಿಯನ್ನು ಪರಿಶೀಲಿಸಿದಾಗ ಅದರ ಮುಂಭಾಗದಲ್ಲಿ ಹಲವು ರಂಧ್ರಗಳಿರುವುದು ಕಂಡು ಬಂದಿದೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇನ್ನಷ್ಟು ಪರಿಶೀಲನೆ ಒಳಪಡಿಸಿದಾಗ ಅದು ವೆಲ್ಡಿಂಗ್ ಮಾಡುವಾಗ ಹಾರುವ ಬೆಂಕಿಯ ಕಿಡಿಗಳಿಂದ ಉಂಟಾಗುತ್ತದೆ ಎಂಬ ನಿರ್ಧಾರಕ್ಕೆ ಬಂದರು. ಘಟನೆ ನಡೆದ ಸುತ್ತಮುತ್ತಲಿನ ವೆಲ್ಡಿಂಗ್ ಕೆಲಸ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆರೋಪಿ ನೀಲಸಂದ್ರದ ಮುನಿಗೌಡ ಗಾರ್ಡನ್‌ನ ಸಯ್ಯದ್ ನದೀಮ್ (22) ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆ ಚಪ್ಪಲಿ ತನ್ನದೆಂದು ಹಣದ ಆಸೆಗಾಗಿ ಅಜ್ಜಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಣದಲ್ಲಿ ಹೊಸ ಬಟ್ಟೆ, ಶೂ ಖರೀದಿಸಿ, ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಖರ್ಚು ಮಾಡಿದ್ದೇನೆ ಎಂದು ತಿಳಿಸಿದ್ದಾನೆ.
ಐದು ವರ್ಷಗಳ ಹಿಂದೆ ಮೃತ ಗಜಲಕ್ಷ್ಮಿ ಅವರ ಗುಜರಿ ಅಂಗಡಿಯ ಹಿಂಭಾಗದಲ್ಲಿದ್ದ ಇಡಬ್ಲ್ಯುಎಸ್ ಕ್ವಾರ್ಟಸ್‌ನಲ್ಲಿ ವಾಸಮಾಡಿಕೊಂಡಿದ್ದ ಆರೋಪಿ ಸಯ್ಯದ್ ನದೀಮ್ ಬಳಿಕ ನೀಲಸಂದ್ರಕ್ಕೆ ತಮ್ಮ ಮನೆಯನ್ನು ಸ್ಥಳಾಂತರಿಸಿದ್ದಾನೆ. 5-6 ವರ್ಷಗಳಿಂದ ಗಜಲಕ್ಷ್ಮಿ ಅವರ ಗುಜರಿ ಅಂಗಡಿಗೆ ಬಂದು ಕಬ್ಬಿಣ ಮತ್ತು ಇತರ ಗುಜರಿ ಸಾಮಾಗ್ರಿಗಳನ್ನು ಮಾಡಿ ಹಣ ಪಡೆದುಕೊಳ್ಳುತ್ತಿದ್ದ. ಈ ವೇಳೆ ಅಜ್ಜಿ ಹಣ ಇಡುತ್ತಿದ್ದ ಚೀಲದ ಮೇಲೆ ಆತನ ಕಣ್ಣು ಬಿದ್ದಿದೆ. ಜೂ15ರಂದು ರಾತ್ರಿ 2 ಗಂಟೆ ಸುಮಾರಿಗೆ ಅಂಗಡಿಯ ಬಳಿಯ ಶೌಚಾಲಯದ ಬಳಿ ಬಚ್ಚಿಟ್ಟುಕೊಂಡು ಅಂಗಡಿಗೆ ನುಗ್ಗಿ ಸಿಮೆಂಟ್ ಇಟ್ಟಿಗೆಯಿಂದ ಅಜ್ಜಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಆದರೆ ಆತನಿಗೆ ಅಜ್ಜಿಯಿಂದ ಸಿಕ್ಕಿದ ಹಣ ಮಾತ್ರ ಕೇವಲ 6800 ರೂ. ತೆಗೆದುಕೊಂಡು ನೇರವಾಗಿ ಮನೆಗೆ ಬಂದು ರಕ್ತಸಿಕ್ತ ಬಟ್ಟೆಗಳನ್ನು ಕವರ್‌ವೊಂದಕ್ಕೆ ಹಾಕಿ ಅದನ್ನು ದೂರ ಬಿಸಾಡಿದ್ದಾನೆ. ಅಲ್ಲಿಂದ ನೇರವಾಗಿ ಶಿವಾಜಿನಗರಕ್ಕೆ ಬಂದು ಹಣದಲ್ಲಿ ಹೊಸ ಶೂ, ಬಟ್ಟೆ ಖರೀದಿಸಿದ್ದ.
ಪ್ರಕರಣವನ್ನು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪವಿಭಾಗದ ಎಸಿಪಿ ಎ.ವಿ. ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿ ಭೇದಿಸಿದ್ದಾರೆ.     (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: