ಮೈಸೂರು

ರೈತರ ಸಾಲಮನ್ನಾ ಬಿಜೆಪಿ ಹೋರಾಟಕ್ಕೆ ಸಂದ ಜಯ: ಪ್ರತಾಪಸಿಂಹ

ಮೈಸೂರು: ಜೂ.೨೧: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕೊನೆಗೂ ಬಿಜೆಪಿ ಒತ್ತಾಯಕ್ಕೆ ಮಣಿದು ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು, ಇದು ಬಿಜೆಪಿಗೆ ಸಂದ ಜಯ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಬೇಕೆಂದು ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಜನಸಂಪರ್ಕ ಅಭಿಯಾನ ಹಮ್ಮಿಕೊಳ್ಳುವ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಅಲ್ಲದೇ ಸರ್ಕಾರದ ಮೂಗು ಹಿಡಿದು ಸಾಲ ಮನ್ನಾ ಮಾಡಿಸುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರು. ಆದರೆ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಮೇಲೆ ಅವಲಂಬಿಸದೇ ಸಾಲ ಮನ್ನಾ ಸಾಧ್ಯವಿಲ್ಲ ಎನ್ನುವ ನಿಲುವು ತಳೆದಿದ್ದರು. ಇದೀಗ ಬಿಜೆಪಿ ಹಮ್ಮಿಕೊಳ್ಳಲಿರುವ ೫ ಲಕ್ಷ ರೈತರ ಬೃಹತ್ ಹೋರಾಟ ಹಾಗೂ ಹಗಲು-ರಾತ್ರಿ ಧರಣಿ ಘೋಷಣೆಯಿಂದ ವಿಚಲಿತರಾಗಿ ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಇಂದು ಸಾಲ ಮನ್ನಾ ಘೋಷಿಸಿದ್ದಾರೆ. ಇದು ಸ್ವಾಗತಾರ್ಹವಾಗಿದೆ ಎಂದರು.
ಅನೇಕ ರಾಜ್ಯಗಳು ರೈತರ ಸಂಕಷ್ಟವನ್ನು ಅರಿತು ಸಾಲಮನ್ನಾ ಘೋಷಿಸಿದ್ದರಿಂದ ಕರ್ನಾಟಕ ಸಹ ಸಾಲ ಮನ್ನಾ ಮೂಲಕ ರೈತರ ನೆರವಿಗೆ ಧಾವಿಸಬೇಕು ಎನ್ನುವ ಕೂಗು ನಿರಂತರವಾಗಿ ಕೇಳಿಬಂದಿತ್ತು. ರಾಜ್ಯ ಸರ್ಕಾರ ಅಂತಿಮವಾಗಿ ಜನತೆಯ ಬೇಡಿಕೆಗೆ ಮಣಿಯಲೇಬೇಕಾಗಿದೆ. ಸತತ ಮೂರು ವರ್ಷಗಳ ಕಾಲ ರೈತರು ಸಂಕಷ್ಟದಲ್ಲಿದ್ದರೂ ಈವರೆಗೂ ರಾಜ್ಯ ಸರ್ಕಾರದ ಮನಸ್ಸು ಕರಗಿರಲಿಲ್ಲ. ಇದೀಗ ಬಿಜೆಪಿ ರಾಜ್ಯಾದ್ಯಂತ ಮಾಡಿದ ಜಾಗೃತಿಯಿಂದಾಗಿ ಸಾಲಮನ್ನಾ ಮಾಡುವ ತೀರ್ಮಾನ ಕೈಗೊಂಡಿದೆ. ಸಹಕಾರ ಸಂಘಗಳ ರೈತರ ೧ಲಕ್ಷ ರೂ ವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಕೃಷಿ ಚಟುವಟಿಕೆಗೆ ವಿಶೇಷ ಒತ್ತು ಸಿಗುವ ದೃಷ್ಟಿಯಿಂದ ಸಹಕಾರ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: