ಕರ್ನಾಟಕ

ಪ್ರಭಾಕರ ಭಟ್ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ

ಮಡಿಕೇರಿ, ಜೂ.21: ಹಿಂದೂಪರ ಸಂಘಟನೆಯ ಪ್ರಮುಖ ಕಲ್ಲಡ್ಕದ ಪ್ರಭಾಕರ ಭಟ್ ವಿರುದ್ಧ ಇರುವ ಪ್ರಕರಣಗಳು ಹಾಗೂ ಅವರು ಗಳಿಸಿರುವ ಆಸ್ತಿಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್, ನಕಲಿ ಹಿಂದುತ್ವದ ಮುಖವಾಡ ತೊಟ್ಟಿರುವ ಪ್ರಭಾಕರ್ ಭಟ್ ಒಂದು ರಾಜಕೀಯ ಪಕ್ಷವನ್ನು ನಿಯಂತ್ರಿಸುವಂತೆ ಪ್ರತಿಬಿಂಬಿಸುತ್ತಾ ತಮ್ಮ ಸಾಮ್ರಾಜ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಭೂ ವ್ಯವಹಾರದಲ್ಲಿ ತೊಡಗಿರುವ ಇವರು ಬೇನಾಮಿ ಹೆಸರಿನಲ್ಲಿ ಸಾಕಷ್ಟು ಆಸ್ತಿ ಗಳಿಸಿದ್ದಾರೆ. ಇವರ ವಿರುದ್ಧ ಅನೇಕ ಕೋಮು ಪ್ರಚೋದಕ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಆಸ್ತಿ ಗಳಿಕೆ ಮತ್ತು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಯಾಗಬೇಕು.  ಪ್ರಭಾಕರ ಭಟ್‍ರ ಕೋಮು ಪ್ರಚೋದನೆಯಿಂದಾಗಿ ಅಮಾಯಕ ಜೀವಗಳು ಬಲಿಯಾಗಿದ್ದು, ಮೃತಪಟ್ಟ ತಂದೆ ತಾಯಂದಿರ ಶಾಪ ತಟ್ಟಲಿದೆ ಎಂದರು.  ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ರಮಾನಾಥ್ ರೈ ಅವರು ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಈ ಕ್ರಮಗಳನ್ನು ಟೀಕಿಸುವುದು ಖಂಡನೀಯವೆಂದು ರಮಾನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಭಾಕರ ಭಟ್ ಅವರು ನಿರಂತರ ಕೋಮು ಗಲಭೆ ಸೃಷ್ಟಿಸುತ್ತಿರುವುದರಿಂದ ಕಲ್ಲಡ್ಕ ಭಾಗದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಭಾಗದ ಜನರು ಶಾಂತಿ ನೆಲೆಸಬೇಕೆನ್ನುವ ಉದ್ದೇಶದಿಂದ 2013ರ ಚುನಾವಣೆಯಲ್ಲಿ ಬದಲಾವಣೆಯನ್ನು ಬಯಸಿದ್ದರು ಎಂದು ಅಭಿಪ್ರಾಯಪಟ್ಟ ರಮಾನಾಥ್ ಕರಾವಳಿ ಭಾಗದ ಸಮೀಪದಲ್ಲೆ ಇರುವ ಕೊಡಗು ಜಿಲ್ಲೆಗೂ ಕೋಮು ಸಂಘರ್ಷ ವ್ಯಾಪಿಸದಂತೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕು. ಜಿಲ್ಲೆಯಲ್ಲಿ ರಚನಾತ್ಮಕ ಹೋರಾಟಗಳಿಗೆ ಆದ್ಯತೆ ನೀಡದೆ ಭಾವನಾತ್ಮಕ ಹೋರಾಟಗಳೆ ವಿಜೃಂಭಿಸುತ್ತಿದೆ. ಕೆಲವು ಶಕ್ತಿಗಳು ತಾವು ಹೇಳಿದಂತೆ ಕೊಡಗು ಜಿಲ್ಲೆ ನಡೆಯಬೇಕೆನ್ನುವ ಮನೋಭಾವ ಹೊಂದಿವೆ. ಪಾಕಿಸ್ತಾನಕ್ಕೆ ಧಿಕ್ಕಾರ ಹೇಳಿದರೆ ಮಾತ್ರ ದೇಶ ಪ್ರೇಮವಲ್ಲ ಎಂದು ಅಭಿಪ್ರಾಯಪಟ್ಟ ಅವರು, ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಯುವ ಜನತೆ ಮುಂದಾಗಬೇಕೆಂದರು. ಪಾಕಿಸ್ತಾನ ಶತ್ರು ರಾಷ್ಟ್ರ ಎನ್ನುವ ವಿಚಾರವನ್ನೆ ಭಾವನಾತ್ಮಕವಾಗಿ ಪರಿವರ್ತಿಸಿ ಶಾಂತಿ ಕದಡುವುದು ಸರಿಯಲ್ಲ. ಪಾಕಿಸ್ತಾನ ಶತ್ರುರಾಷ್ಟ್ರ ಎನ್ನುವ ಪರಿಕಲ್ಪನೆಯೆ ತಪ್ಪು ಎಂದು ಅಭಿಪ್ರಾಯಪಟ್ಟ ರಮಾನಾಥ್, ಏಳನೇ ಹೊಸಕೋಟೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಖಂಡಿಸುವುದಾಗಿ ತಿಳಿಸಿದರು.

ಜೂ.27 ರಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಭೆಯು ನಗರದ ಬಾಲಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಬಿ.ಎಸ್. ರಮಾನಾಥ್ ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ನೆರವಂಡ ಉಮೇಶ್,  ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಪತ್ರಾವೋ ಹಾಗೂ ಕಾರ್ಯದರ್ಶಿ ಕುದುಪಜೆ ಪ್ರಕಾಶ್ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: