ಕರ್ನಾಟಕ

ಅಂತಾರಾಷ್ಟ್ರೀಯ ಯೋಗದಿನದಲ್ಲಿ ಪಾಲ್ಗೊಂಡು ಯೋಗ ಮಾಡುವ ಮೂಲಕ ಗಮನ ಸೆಳೆದ ಅಧಿಕಾರಿ ವರ್ಗ

ರಾಜ್ಯ,(ಕಲಬುರಗಿ)ಜೂ.21:- ನಗರದ ಪೊಲೀಸ್ ಪರೇಡ್ ಮೈದಾನದಲ್ಲಿಂದು ಜಿಲ್ಲಾಡಳಿತ, ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಮೂರನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹೆಚ್.ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಐಜಿಪಿ ಅಲೋಕಕುಮಾರ, ಎಸ್ಪಿ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಭಾಗವಹಿಸಿ ಯೋಗ ಮಾಡುವುದರ ಮೂಲಕ ಗಮನ ಸೆಳೆದರು.
ಮುಂಜಾನೆಯೇ ಆರಂಭವಾದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ನಗರದ ನಾಗರಿಕರು ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು. ಇಡೀ ಮೈದಾನವೇ ಯೋಗ ಪಟುಗಳಿಂದ ತುಂಬಿ ಹೋದಂತೆ ಭಾಸವಾಗಿತ್ತು. ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯೋಗದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಇದೇ ಸಂದರ್ಭದಲ್ಲಿ ಐಜಿಪಿ ಅಲೋಕಕುಮಾರ ಅವರು ಪೊಲೀಸ್ ಪರೇಡ್ ಮೈದಾನದಲ್ಲಿ ಸಸಿ ನೆಟ್ಟು ನೀರೆದರು. ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ಪರೇಡ್ ಮೈದಾನ ಮಾತ್ರವಲ್ಲದೆ ನಗರದ ವಿವಿಧೆಡೆಯೂ  ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಶಿವ ಶಿಕ್ಷಣ ಸಂಸ್ಥೆ, ಪತಂಜಲಿ ಯೋಗ ಪೀಠದ ವತಿಯಿಂದ ನಗರದ ರೈಲು ನಿಲ್ದಾಣದ ಹತ್ತಿರದ ಶಿವ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನ ಆಚರಿಸಲಾಯಿತು. ಅಲ್ಲದೆ ನೆಹರು ಯುವ ಕೇಂದ್ರ, ಶಿಕ್ಷಣ ಇಲಾಖೆ ಭಾರತ ಸೇವಾದಳ ಹಾಗೂ ಸ್ಪೂರ್ತಿ ಯುವಕ ಸಂಘದ ವತಿಯಿಂದಲೂ ಸೂಪರ್ ಮಾರ್ಕೆಟ್ ಆಸಿಫ್ ಗಂಜ್ ನ ಸರ್ಕಾರಿ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: