ಪ್ರಮುಖ ಸುದ್ದಿ

ಸ್ವಚ್ಛತೆ, ಆರೋಗ್ಯಪೂರಕ ಜಾಗೃತಿ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಿ: ರಾಮು

ಪ್ರಮುಖ ಸುದ್ದಿ, ಚಾಮರಾಜನಗರ, ಜೂ.೨೧: ಡೆಂಗ್ಯೂ ಸೇರಿದಂತೆ ಇತರೆ ಜ್ವರ ಸಂಬಂಧಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸ್ವಚ್ಚತೆ ಹಾಗೂ ಆರೋಗ್ಯಪೂರಕ ಜಾಗೃತಿ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ರಾಮು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಂಕ್ರಾಮಿಕ ರೋಗಗಳ ಸ್ಥಿತಿಗತಿ ಪರಾಮರ್ಶೆ ಹಾಗೂ ಇತರೆ ಆರೋಗ್ಯ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡೆಂಗ್ಯೂ ಇತರೆ ಜ್ವರ ಸಂಬಂಧಿ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಹೀಗಾಗಿ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಬೇಕು. ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೈರ್ಮಲ್ಯಪೂರಕ ಕ್ರಮಗಳನ್ನು ತಕ್ಷಣದಿಂದಲೇ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ವ್ಯಾಪಕವಾಗಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ, ಕಸ ವಿಲೇವಾರಿ, ಸೊಳ್ಳೆಗಳ ನಿರ್ಮೂಲನೆ, ಇತರೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೂಡಲೇ ತಹಸೀಲ್ದಾರ್ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ತಾಲೂಕು ಆರೋಗ್ಯ ಅಧಿಕಾರಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿ ಸಿಬ್ಬಂದಿಯನ್ನು ಒಳಗೊಂಡ ಸಭೆಯನ್ನು ಕರೆಯಬೇಕು. ಅಗತ್ಯವಾಗಿ ಚಾಲನೆ ನೀಡಬೇಕಿರುವ ಆರೋಗ್ಯ ಸಂಬಂಧಿ ಕೆಲಸಗಳಿಗೆ ಕಾರ್ಯೋನ್ಮುಖರಾಗಲು ಸೂಚಿಸಬೇಕೆಂದು ತಿಳಿಸಿದರು.
ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿ, ಅನುಪಯುಕ್ತ ಸ್ಥಳಗಳಲ್ಲಿ ನೀರು ನಿಲ್ಲದಂತೆ ವಿಲೇವಾರಿ ಮಾಡಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳು ಇರದಂತೆ ವಹಿಸಬೇಕಿರುವ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಚತೆ ಹಾಗೂ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸಗಳು ಜತೆಜತೆಯಲ್ಲಿಯೇ ಸಾಗಬೇಕು. ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿಯ ಅಂಗಡಿಗಳಲ್ಲಿ ನೈರ್ಮಲ್ಯ ಕ್ರಮಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಆರೋಗ್ಯಕರ ವಿದಾನಗಳನ್ನು ಅನುಸರಿಸದೇ ಇರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಎಂ.ಅನಿಲ್ ಕುಮಾರ್, ಜಿಲ್ಲಾ ಕಣ್ಗಾವಲು ಘಟಕ ಅಧಿಕಾರಿ ಡಾ. ಎಂ.ನಾಗರಾಜು, ತಹಸೀಲ್ದಾರ್ ಪುರಂಧರ, ಚಂದ್ರಮೌಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮಕುಮಾರ್, ನಗರಸಭೆ ಆಯುಕ್ತ ರಾಜಣ್ಣ, ರಮೇಶ್, ಇನ್ನಿತರ ಸ್ಥಳೀಯ ಸಂಸ್ಥೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: