ಕರ್ನಾಟಕಪ್ರಮುಖ ಸುದ್ದಿ

ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳಿಗೂ ಕಡ್ಡಾಯ ಗ್ರಾಮೀಣ ಸೇವೆ : ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು, ಜೂ. 21 : ರಾಜ್ಯದ ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳಿಗೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಇಂದು ವಿಧಾನ ಪರಿಷತ್‍ನಲ್ಲಿ ಈ ವಿಷಯ ತಿಳಿಸಿದರು.  “ಕರ್ನಾಟಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಕಾಯ್ದೆ- 2017 (ತಿದ್ದುಪಡಿ) ಮಸೂದೆ” ಬಗ್ಗೆ ಮಾತನಾಡಿದ ಅವರು, ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಲ್ಪಡುವ ರಾಜ್ಯದ ಹಾಗೂ ಇತರೆ ಎಲ್ಲ ವಿದ್ಯಾರ್ಥಿಗಳಿಗೂ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಕಡ್ಡಾಯ ಎಂದು ಘೋಷಿಸಿದ್ದಾರೆ.

ಈ ಮುಂಚೆ ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್ ಮಾಡುವವರಿಗೆ ಮಾತ್ರ ಗ್ರಾಮೀಣ ಸೇವೆ ಕಡ್ಡಾಯವಾಗಿತ್ತು. ಈಗ ತಿದ್ದುಪಡಿ ಮೂಲಕ ಇತರೆ ರಾಜ್ಯಗಳಲ್ಲೂ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದು, ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಲ್ಪಡುವ ಎಲ್ಲರಿಗೂ ಗ್ರಾಮೀಣ ಸೇವೆ ಕಡ್ಡಾಯ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಎಂಬಿಬಿಎಸ್ ಮುಗಿಸಿದ ಕೂಡಲೇ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆಯಿಂದ ವಿನಾಯ್ತಿ ನೀಡಲಾಗಿದೆ. ಆದರೆ ಸ್ನಾತಕೋತ್ತರ ಪದವಿ ಮುಗಿದ ನಂತರ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕು ಎಂದು ಶರಣ್ ಪ್ರಕಾಶ್ ಪಾಟೀಲ್ ಅವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 1 ಸಾವಿರ ರೋಗಿಗಳಿಗೆ ಒಬ್ಬ ತಜ್ಞ ವೈದ್ಯರಿರಬೇಕು. ಆದರೆ ಕರ್ನಾಟಕದಲ್ಲಿ 1,700 ರೋಗಿಗಳಿಗೆ ಒಬ್ಬ ತಜ್ಞ ವೈದ್ಯರಿದ್ದಾರೆ. ಹೀಗಾಗಿ ಈ ತಿದ್ದುಪಡಿ ವಿಧೇಯಕದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 3,300 ಎಂಬಿಬಿಎಸ್ ಹಾಗೂ 2 ಸಾವಿರ ಸ್ನಾತಕೋತ್ತರ ಪದವಿ ಪಡೆಗ ತಜ್ಞ ವೈದ್ಯರು ದೊರೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: