ದೇಶಪ್ರಮುಖ ಸುದ್ದಿ

ರಾಮನಾಥ್ ಕೋವಿಂದ್‍ಗೆ ಜೆಡಿಯು ಬೆಂಬಲ : ವಿಪಕ್ಷಗಳ ಹೋರಾಟ ಮುಗಿದ ಅಧ್ಯಾಯ?

ಪಾಟ್ನಾ, ಜೂ. 21 : ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಹುದ್ದೆಗಾಗಿ ಎನ್‍ಡಿಎ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರಿಗೆ ಜೆಡಿಯು ಬೆಂಬಲ ವ್ಯಕ್ತಪಡಿಸಿದೆ.

“ರಾಮನಾಥ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಪಕ್ಷದ ಎಲ್ಲ ನಾಯಕರು ನಿರ್ಧರಿಸಿದ್ದಾರೆ. ಕೋವಿಂದ್ ಅವರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಬಿಹಾರದ ಮೊದಲ ರಾಜ್ಯಪಾಲರಾಗಿದ್ದಾರೆ. ಇದು ನಮಗೆಲ್ಲರಿಗೆ ಸಂತಸದ ವಿಷಯ. ಬಿಹಾರದ ಅಭಿವೃದ್ಧಿಗೂ ಇದರಿಂದ ನೆರವು ಸಿಗಬಹುದು” ಎಂದು ಜೆಡಿಯು ನಾಯಕ ರತ್ನೇಶ್ ಸಾದಾ ಅವರು ಹೇಳಿದ್ದಾರೆ.

ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಬಹುತೇಕ ಎಲ್ಲ ಶಾಸಕರೂ ಕೋವಿಂದ್ ಅವರನ್ನು ಬೆಂಬಲಿಸಿದರು ಎಂದು ಸಾದಾ ಹೇಳಿದ್ದಾರೆ. ಜೆಡಿಯು ಬೆಂಬಲ ಎನ್‍ಡಿಎ ಕಡೆ ತಿರುಗಿರುವುದರಿಂದ ಪ್ರತಿಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ.

ರಾಷ್ಷ್ರಪತಿ ಅಭ್ಯರ್ಥಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಾಳೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಯಲಿದೆ. ಆದರೆ ಈಗಾಗಲೇ ಹಲವಾರು ಪ್ರಾದೇಶಿಕ ಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಕೋವಿಂದ್ ಅವರಿಗೆ ಬೆಂಬಲ ಸೂಚಿಸಿವೆ.

ಎಸ್‍ಪಿ, ಶಿವಸೇನೆ, ಬಿಜೆಡಿ, ಎಐಎಡಿಎಂಕೆ, ಟಿಆರ್‍ಎಸ್‍, ಟಿಡಿಪಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷಗಳು  ಬಿಜೆಪಿ ಅಭ್ಯರ್ಥಿಯ ಪರವಾಗಿವೆ. ಈ ಕಾರಣದಿಂದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಮೈತ್ರಿಕೂಟ ಇನ್ನಷ್ಟು ದುರ್ಬಲವಾಗಿದ್ದು ಎನ್‍ಡಿಎ ಅಭ್ಯರ್ಥಿಗೆ ಪೈಪೋಟಿ ನೀಡುವಷ್ಟು ಸಂಖ್ಯಾಬಲ ಒಗ್ಗೂಡಿಸುವುದು ಮೇಲ್ನೋಟಕ್ಕೆ ಕಷ್ಟವಾಗಿದೆ.

-ಎನ್.ಬಿ.ಎನ್.

Leave a Reply

comments

Related Articles

error: