ಕರ್ನಾಟಕ

ಯೋಗ ಮೈಗೂಡಿಸಿಕೊಂಡರೆ ರೋಗ ದೂರ: ಕಾವೇರಮ್ಮ ಸೋಮಣ್ಣ

ಮಡಿಕೇರಿ,ಜೂ.21-ರೋಗಗಳಿಂದ ದೂರವಿರಲು ಪ್ರಾಚೀನ ಆರೋಗ್ಯ ಪದ್ಧತಿಯಾದ ಯೋಗವನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ವತಿಯಿಂದ ನಗರದ ಕೊಡವ ಸಮಾಜದಲ್ಲಿ  ಬುಧವಾರ ನಡೆದ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾರೀರಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯೋಗ ಸಹಕಾರಿಯಾಗಿದೆ. ಇದರಿಂದ ಆತ್ಮ ಸದೃಢ ಹೆಚ್ಚಲಿದೆ. ಜೊತೆಗೆ ಶಾಂತಿ, ಸಹನೆ, ತಾಳ್ಮೆ ಬೆಳೆಸಿಕೊಳ್ಳಲು ಯೋಗ ಅನುಕೂಲ. ಆದ್ದರಿಂದ ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸರ್ಕಾರ ನಗರದ ಯಾವುದಾದರೂ ಒಂದು ಉದ್ಯಾನವನಕ್ಕೆ ‘ಯೋಗ ಪಾರ್ಕ್’ ಎಂದು ನಾಮಕರಣ ಮಾಡಬೇಕೆಂದು ತಿಳಿಸಿದೆ. ಅದರಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಬಳಿ ಇರುವ ಉದ್ಯಾನವನಕ್ಕೆ ‘ಯೋಗ ಉದ್ಯಾನವನ’ವೆಂದು  ಹೆಸರಿಡಲು ನಗರಸಭೆ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಆರ್ಟ್ ಆಫ್ ಲಿವಿಂಗ್‍ನ ರಾಜಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ, ಆರ್ಟ್ ಆಫ್ ಲಿವಿಂಗ್‍ನ ಕೆ.ಡಬ್ಲ್ಯು ಬೋಪಯ್ಯ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಯೋಗ ತರಬೇತಿದಾರ ಮಹೇಶ್ ಕುಮಾರ್ ನೇತೃತ್ವದಲ್ಲಿ ಎಲ್ಲರೂ ಯೋಗ ಪ್ರದರ್ಶನ ಮಾಡಿದರು. ಆಯುಷ್ ಅಧಿಕಾರಿ ಡಾ.ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಡಾ.ಶುಭಾ ಪ್ರಾರ್ಥಿಸಿದರು. ಡಾ.ಅಮೂಲ್ಯ ವಂದಿಸಿದರು. (ಕೆ.ಸಿ.ಐ,ಎಂ.ಎನ್)

Leave a Reply

comments

Related Articles

error: