ದೇಶಪ್ರಮುಖ ಸುದ್ದಿವಿದೇಶ

ಕತಾರ್‍ನಿಂದ ಭಾರತೀಯರನ್ನು ಕರೆತರಲು ಹೆಚ್ಚುವರಿ ವಿಮಾನ ಸಂಚಾರ

ನವದೆಹಲಿ, ಜೂ. 22 : ಕತಾರ್‍ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರವು ಹೆಚ್ಚುವರಿ ವಿಮಾನಗಳ ವ್ಯವಸ್ಥೆ ಮಾಡಿದೆ. ಇಂದಿನಿಂದಲೇ ಹೆಚ್ಚುವರಿ ವಿಮಾನಗಳು ಭಾರತ ಮತ್ತು ಕತಾರ್ ರಾಜಧಾನಿ ದೋಹಾ ನಡುವೆ ಓಡಾಡಲಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರ ಜತೆ ಜೂನ್ 19 ರಂದು ಈ ಕುರಿತು ಮಾತುಕತೆ ನಡೆಸಿ ಕತಾರ್‍ನಿಂದ ಭಾರತಕ್ಕೆ ಹೆಚ್ಚುವರಿ ವಿಮಾನ ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಗಲ್ಫ್ ದೇಶಗಳಲ್ಲಿ ಹೆಚ್ಚಾಗಿ ಕೇರಳಿಗರು ನೆಲೆಸಿರುವ ಕಾರಣ ಕೇರಳಕ್ಕೆ ಹೆಚ್ಚಿನ ವಿಮಾನ ಸೇವೆ ಒದಗಿಸುವಂತೆಯೂ ಸುಷ್ಮಾ ಅವರು ಮನವಿ ಮಾಡಿದ್ದರು.

168 ಆಸನ ಸಾಮರ್ಥ್ಯದ ಜೆಟ್ ಏರ್‍ವೇಸ್‍ ವಿಮಾನವು ಮುಂಬೈ-ದೋಹಾ ನಡುವೆ ಜೂನ್ 22 ಮತ್ತು 23 ರಂದು ಸಂಚರಿಸಲಿದೆ. ಇದಲ್ಲದೆ ತಿರುವನಂತಪುರಂ-ದೋಹಾ, ದೋಹಾ-ಕೊಚ್ಚಿ ನಡುವೆ ಜೂನ್ 25 ರಿಂದ ಜುಲೈ 8 ರ ವರೆಗೆ 186 ಆಸನ ವ್ಯವಸ್ಥೆಯ ಏರ್ ಇಂಡಿಯಾ ವಿಮಾನ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಮಧ್ಯಪೂರ್ವ ದೇಶಗಳಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದೆ. ಕತಾರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿಅರೇಬಿಯಾ, ಈಜಿಪ್ಟ್, ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಕತಾರ್ ಜತೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿವೆ. ಭಾರತವು ಪರಿಸ್ಥಿತಿಯ ಮೇಲೆ ಸೂಕ್ಷ್ಮ ನಿಗಾ ವಹಿಸಿದ್ದು, ಕತಾರ್‍ನಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್‍ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದೆ.

-ಎನ್.ಬಿ.

Leave a Reply

comments

Related Articles

error: