ದೇಶಪ್ರಮುಖ ಸುದ್ದಿ

ಜಿಎಸ್‍ಟಿ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಅಮಿತಾಬ್ ಬಚ್ಚನ್‍ಗೆ ಕಾಂಗ್ರೆಸ್ ಪಕ್ಷ ಒತ್ತಾಯ!

ಮುಂಬೈ, ಜೂ.22 : ಜಿಎಸ್‍ಟಿ ಕಾಯ್ದೆಯ ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ವ್ಯಾಪಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುವುದರಿಂದ ಈ ಕಾಯ್ದೆಯ ಪ್ರಚಾರದಿಂದ ದೂರ ಉಳಿಯುವಂತೆ ಕಾಂಗ್ರೆಸ್ ಪಕ್ಷವು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಸಲಹೆ ಮಾಡಿದೆ!

ಕೇಂದ್ರ ಸರ್ಕಾರ ಜುಲೈ 1 ರಿಂದ ಜಾರಿ ಮಾಡಲಿರುವ ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಿಂದ ವ್ಯಾಪಾರಿಗಳಿಗೆ ನಷ್ಟವುಂಟಾಗಲಿದೆ. ಹೀಗಾಗಿ ಮಸೂದೆಯ ಪ್ರಚಾರದಿಂದ ದೂರ ಉಳಿಯುವಂತೆ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ಬಚ್ಚನ್ ಅವರಿಗೆ ಒತ್ತಾಯಿಸಿದ್ದಾರೆ.

“ಜಿಎಸ್‍ಟಿ ವ್ಯವಸ್ಥೆಯು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತರಲು ಯೋಜಿಸಿದ್ದ ಒಂದು ಉತ್ತಮ ವ್ಯವಸ್ಥೆ. ಆದರೆ ಬಿಜೆಪಿಯು ಈ ವ್ಯವಸ್ಥೆಯ ಆಶಯಗಳಿಗೆ ಧಕ್ಕೆ ತಂದು ತನಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆಯನ್ನು ಬದಲಾವಣೆ ಮಾಡಿಕೊಂಡಿದೆ. ಹೀಗಾಗಿ ನಾವು ಜಿಎಸ್‍ಟಿಯನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಸಂಜಯ್ ಹೇಳಿದ್ದಾರೆ.

ಬಿಜೆಪಿಯು ಜಿಎಸ್ಟಿಯಯನ್ನು  ಮೂರು ವಿವಿಧ ಉಪ ವಿಧಗಳು ಮತ್ತು ನಾಲ್ಕು ತೆರಿಗೆ ಹಂತಗಳಲ್ಲಿ ಜಿಎಸ್‍ಟಿಯನ್ನು ಪರಿಚಯಿಸುತ್ತಿದೆ. ಮಸೂದೆ ಈಗ ತುಂಬಾ ಜಟಿಲವಾಗಿದೆ. ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು ಪ್ರತಿ ತಿಂಗಳು ಮೂರು ಅರ್ಜಿಗಳನ್ನು ತುಂಬಬೇಕಾಗಿದೆ. ಬಿಜೆಪಿ ಸರ್ಕಾರವು ಜಿಎಸ್ಟಿಯ ಮೂಲ ಉದ್ದೇಶವನ್ನೇ ಹಾಳು ಮಾಡಿದೆ. ಈ ಕಾರಣದಿಂದ ನಾವು ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಸಂಜಯ್ ಹೇಳಿದರು.

ನೀವೇ ರೂಪಿಸಿದ್ದ ಯೋಜನೆಗೆ ವಿರೋಧವೇಕೆ?

ಕಾಂಗ್ರೆಸ್ ರೂಪಿಸಿದ್ದ ಯೋಜನೆಗೆ ಈಗ ಕಾಂಗ್ರೆಸ್ ಪಕ್ಷವೇ ಏಕೆ ವಿರೋಧಿಸುತ್ತಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಂಜಯ್, ಜಿಎಸ್‍ಟಿ ಮಸೂದೆಯನ್ನು ಕಾಂಗ್ರೆಸ್ ಪಕ್ಷ ತರಲು ಉದ್ದೇಶಿಸಿದ್ದು ನಿಜ. ಆದರೆ ಅದು ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಿಂತ ತೀರಾ ಭಿನ್ನವಾಗಿತ್ತು. ಈ ವಿಚಾರದಲ್ಲಿ ಕೆಲವರು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಜೊತೆಗೆ ದೇಶದ ಜನರನ್ನು ಮೂರ್ಖ ಮಾಡಲು ಹೊರಟಿರುವ ಜಿಎಸ್‍ಟಿ ಬಗ್ಗೆ ಪ್ರಚಾರದಲ್ಲಿ ಭಾಗಿಯಾಗಬೇಡಿ ಎಂದು ನಟ ಅಮಿತಾಬ್ ಬಚ್ಚನ್ ಅವರಿಗೆ ಸಲಹೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ ಪಕ್ಷವು “ಸರಕು ಮತ್ತು ಸೇವಾ ತೆರಿಗೆ”ಯನ್ನು ವಿರೋಧಿಸಿ ವಿವಾದ ಎಬ್ಬಿಸುವ ಸೂಚನೆ ನೀಡಿದರು.

-ಎನ್.ಬಿ.

Leave a Reply

comments

Related Articles

error: