ದೇಶಪ್ರಮುಖ ಸುದ್ದಿವಿದೇಶ

ಮೂವತ್ತು ಉಪಗ್ರಹ ಹೊತ್ತೊಯ್ಯಲಿರುವ ಪಿಎಸ್‍ಎಲ್‍ವಿ-ಸಿ38 ಉಡಾವಣೆಗೆ ಕ್ಷಣಗಣನೆ ಆರಂಭ

ಚೆನ್ನೈ, ಜೂ. 22 : ಏಕ ಕಾಲಕ್ಕೆ ಮೂವತ್ತು ಉಪಗ್ರಹಗಳನ್ನು ಹೊತ್ತೊಯ್ಯಲಿರುವ ರಾಕೆಟ್ ‘ಪಿಎಸ್‍ಎಲ್‍ವಿ-ಸಿ38’ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ – ಇಸ್ರೋ ಕ್ಷಣಗಣನೆ ಆರಂಭಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಗ್ಗೆ 5.29 ರಿಂದ 28 ಗಂಟೆಗಳ ಕಾಲಗಣನೆ ಆರಂಭವಾಗಿದ್ದು, ನಾಳೆ ಬೆಳಗ್ಗೆ 09.20ಕ್ಕೆ ಇದು ನಭಕ್ಕೆ ಹಾರಲಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ – ಪಿಎಸ್‍ಎಲ್‍ವಿ-ಸಿ38 ಬಳಸಿ ಉಡಾವಣೆ ಮಾಡುತ್ತಿರುವುದು ಇದು 40ನೇ ಬಾರಿಯಾಗಿದ್ದು, ತನ್ನ 40ನೇ ಉಡಾವಣೆಯಲ್ಲಿ 712 ಕೆಜಿ ತೂಕದ ಕಾರ್ಟೊಸ್ಯಾಟ್-2 ಸರಣಿಯ ಉಪಗ್ರಹವನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಅಂತರಿಕ್ಷದಿಂದ ಭೂಮಿಯ ವೀಕ್ಷಣೆ-ಅಧ್ಯಯನಕ್ಕಾಗಿ ಈ ಉಪಗ್ರಹವನ್ನು ಇಸ್ರೊ ಬಳಸಿಕೊಳ್ಳಲಿದೆ.

ಇದರ ಜೊತೆಗೆ 243 ಕೆಜಿ ತೂಕದ 30 ಉಪಗ್ರಹಗಳನ್ನೂ 505 ಕಿ.ಮೀ. ಎತ್ತರದ ಪೋಲಾರ್ ಸನ್ ಸಿಂಕ್ರೋನಸ್ ಆರ್ಬಿಟ್ – ಎಸ್‍ಎಸ್‍ಒ ಕಕ್ಷೆಗೆ ಸೇರಿಸಲಾಗುವುದು ಎಂದು ಇಸ್ರೊ ಹೇಳಿದೆ.

ಇಸ್ರೊ ಈ ಬಾರಿ ಹದಿನಾಲ್ಕು ದೇಶಗಳ ಉಪಗ್ರಹಗಳನ್ನು ಉಪಗ್ರಹಗಳನ್ನು ಹೊತ್ತಯ್ಯಲಿದ್ದು, ಆಸ್ಟ್ರಿಯ, ಬೆಲ್ಜಿಯಂ, ಚಿಲಿ, ಚೆಕ್ ರಿಪಬ್ಲಿಕ್, ಫಿನ್‍ಲೆಂಡ್, ಫಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲುಥುವೇನಿಯಾ, ಸ್ಲೋವಾಕಿಯ, ಬ್ರಿಟನ್ ಮತ್ತು ಅಮೆರಿಕದ 29 ನ್ಯಾನೋ ಸ್ಯಾಟಲೈಟ್‍ಗಳೂ ಇದರಲ್ಲಿ ಸೇರಿವೆ. ಭಾರತದ ಪುಟ್ಟ ಉಪಗ್ರಹಗಳೂ ಈ ವಾಹನದಲ್ಲಿರಲಿದ್ದು, ಸಂವಹನ, ಹವಾಮಾನ ಅಧ್ಯಯನಕ್ಕಾಗಿ ಇವುಗಳನ್ನು ಬಳಸಿಕೊಳ್ಳಲಾಗುವುದು.

ಉಪಗ್ರಹಗಳ ಒಟ್ಟು ತೂಕ 995 ಕೆಜಿಯನ್ನು ಪಿಎಸ್‍ಎಲ್‍ವಿ-ಸಿ38 ಉಪಗ್ರಹ ಹೊತ್ತೊಯ್ಯುತ್ತಿರುವುದು ಹೊಸ ಪ್ರಯೋಗವಾಗಿದೆ. ಈಗಾಗಲೇ ಹಲವು ದಾಖಲೆ ಬರೆದು ವಿಶ್ವದ ಗಮನ ಸೆಳೆದಿರುವ ಇಸ್ರೊ, ಮತ್ತೊಂದು ಮಹತ್ಸಾಧನೆಗೆ ಸಜ್ಜಾಗಿದೆ.

-ಎನ್.ಬಿ.

Leave a Reply

comments

Related Articles

error: