ಕ್ರೀಡೆಪ್ರಮುಖ ಸುದ್ದಿ

ಕೊಹ್ಲಿ ವಿರುದ್ಧ ಗವಾಸ್ಕರ್ ಮತ್ತೆ ಕಿಡಿ : ಕೊಹ್ಲಿಯೇ ಕೋಚ್ ಆಯ್ಕೆ ಮಾಡಲಿ ಎಂದ ಲಿಟ್ಲ್ ಮಾಸ್ಟರ್

ಮುಂಬೈ, ಜೂ. 22 : ಟೀಮ್ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜೀನಾಮೆಯ ನಂತರ ಕೊಹ್ಲಿ ಮೇಲೆ ಮುನಿಸಿಕೊಂಡಿರುವ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

“ಕೇವಲ ನಾಯಕನ ಇಷ್ಟ-ಕಷ್ಟಗಳೇ ಅತಿಯಾಗಿ ಮಹತ್ವ ಪಡೆಯುವುದಾದರೆ ಕ್ರಿಕೆಟ್ ಆಯ್ಕೆ ಸಮಿತಿಗೆ ಏನು ಕೆಲಸ? ಎಂದು ಗವಾಸ್ಕರ್ ಅವರು ಖಾರವಾಗಿ ಪ್ರಶ್ನಿಸಿದ್ದು, ಕೋಚ್‍ ಆಯ್ಕೆಗಾಗಿ ಸಮಿತಿಯೇ ಬೇಡ. ನಾಯಕ ಕೊಹ್ಲಿಯೇ ಆಯ್ಕೆ ಮಾಡಲಿ ಎಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಬಿಸಿಸಿಐನ ಸಲಹಾ ಸಮಿತಿಯಲ್ಲಿ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರುಗಳು ಇದ್ದು, ತಂಡದ ಕೋಚ್‍ ಆಯ್ಕೆಯ ವೇಳೆ ಇವರು ಮಹತ್ವದ ಪಾತ್ರ ವಹಿಸುವವರು. ಕಳೆದ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಈ ಮೂವರೂ ಕುಂಬ್ಳೆ ಹಾಗೂ ಕೊಹ್ಲಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸದ್ದಾರೆ. ಈ ಭೇಟಿಯ ಬಳಿಕ ಸಲಹಾ ಸಮಿತಿ ಕುಂಬ್ಳೆಯನ್ನೇ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರೆಯುವಂತೆ ಸೂಚಿಸಿತ್ತು. ಆದರೆ ಈ ನಿರ್ಣಯವನ್ನು ಕೊಹ್ಲಿ ವಿರೋಧಿಸಿರುವುದರಿಂದ ಗವಾಸ್ಕರ್ ಸಿಟ್ಟಾಗಿದ್ದಾರೆ.

ಹೀಗಾಗಿಯೇ ಗವಾಸ್ಕರ್ ಅವರು “ತಂಡದ ಆಟಗಾರರು ಹಾಗೂ ನಾಯಕನ ಇಚ್ಛೆಯಂತೆ ಕೋಚ್ ಆಯ್ಕೆ ನಿರ್ಣಯ ಮಾಡುವುದಾದರೆ ಆಯ್ಕೆ ಸಮಿತಿಗೇನು ಕೆಲಸ? ಈ ಸಮಿತಿಯ ಅಗತ್ಯವೇನಿದೆ?” ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ “ಆಟಗಾರರು ಹಾಗೂ ನಾಯಕ ಕೊಹ್ಲಿಯನ್ನೇ ನೇರವಾಗಿ ಕೋಚ್ ಯಾರಾಗಬೇಕು ಎಂದು ಕೇಳಿ. ಇದರಿಂದ ಸಮಯವೂ ನಷ್ಟವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇಷ್ಟೇ ಅಲ್ಲದೆ, ಕೊಹ್ಲಿ ಕೂಡಾ ಈ ವಿಚಾರವಾಗಿ ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೊಹ್ಲಿ ಮತ್ತು ಕುಂಬ್ಳೆ ನಡುವಿನ ವಿವಾದ ಬಹಿರಂಗಗೊಂಡಾಗಿನಿಂದಲೂ ಸುನಿಲ್ ಗವಾಸ್ಕರ್ ಅವರು ಕುಂಬ್ಳೆ ಪರವಾಗಿ ಮಾತನಾಡಿ ಕೊಹ್ಲಿಗೆ ಬಿಸಿ ಮುಟ್ಟಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: