ಮೈಸೂರು

ಅಂಬಾರಿ ಹೊರಲು ಅರ್ಜುನ ಸಂಪೂರ್ಣ ಸನ್ನದ್ಧ: ಪ್ರಥಮ ಬಾರಿಗೆ ಅರ್ಜುನನನ್ನು ಮುನ್ನಡೆಸಲಿರುವ ಸಣ್ಣಪ್ಪ

ದಸರಾ ಬಂತೆಂದರೆ ಮೊದಲು ನೆನೆಪಾಗುವುದು ಆನೆ ಮತ್ತು ಅಂಬಾರಿ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ ಹೊತ್ತ ಆನೆಯಾಗಿದೆ. ಆವಾಗಿನಿಂದಲೂ ಆನೆ ಮೇಲೆ ಅಂಬಾರಿ ಹೊತ್ತು ಸಾಗುವ ಕಾರ್ಯ ನಡೆದುಕೊಂಡು ಬಂದಿದೆ.

ಮೈಸೂರಿಗೆ ಆನೆಗಳು ಬಂತು ಎಂದರೆ ಜನ ಆಗಿಂದಲೇ ದಸರಾ, ಜಂಬೂಸವಾರಿಗೆ ದಿನಗಳನ್ನು ಲೆಕ್ಕ ಮಾಡಲಾರಂಭಿಸುತ್ತಾರೆ. ದಸರಾ ಸಮಯದಲ್ಲಿ ಮೈಸೂರಿನಲ್ಲಿ ಸ್ವರ್ಗವೇ ಸೃಷ್ಟಿಯಾದಂತೆ ಭಾಸವಾಗುತ್ತದೆ. ದಸರಾದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಯನ್ನು ಹೊತ್ತು ನಡೆಯುವ ಆನೆಯ ಗಾಂಭೀರ್ಯ ನಡಿಗೆ ನೋಡುವುದೇ ಒಂದು ದಿವ್ಯ ಅನುಭವ.

ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ ಕೀಟಲೆ ಸ್ವಭಾವವಿದ್ದು, ಅರ್ಜುನನ ಮೇಲೆ ಸಾಕಷ್ಟು ಟೀಕೆಗಳು ಬಂದಿತ್ತು. ಆದರೂ ಬಲರಾಮನಿಗೆ ವಯಸ್ಸಾದ ಕಾರಣ 2012ರಿಂದ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ ನೀಡಲಾಗಿದೆ. ಅರ್ಜನ ಬರೋಬ್ಬರಿ 5,615 ಕೆಜಿ ತೂಕವನ್ನು ಹೊಂದುವ ಮೂಲಕ ತಂಡದ ಎಲ್ಲ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.

ಚಾಮುಂಡಿದೇವಿಯ ವಿಗ್ರಹವಿರುವ ಚಿನ್ನದ ಅಂಬಾರಿಯನ್ನು ಹೊರಲಿರುವ ಅರ್ಜುನನಿಗೆ ದೊಡ್ಡ ಮಾಸ್ತಿ ಮಗ ಸಣ್ಣಪ್ಪ ಮಾವುತರಾಗಿದ್ದಾರೆ. ಪ್ರಥಮ ಬಾರಿಗೆ ದಸರಾದಲ್ಲಿ ಅರ್ಜುನನ್ನು ಮುನ್ನಡೆಸಲಿರುವ ಸಣ್ಣಪ್ಪ ಅವರನ್ನು ‘ಸಿಟಿ ಟುಡೇ’ ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು,

ಇತ್ತೀಚಿಗೆ ನಮ್ಮ ತಂದೆ ದೊಡ್ಡ ಮಾಸ್ತಿಯವರು ನಿಧನರಾದ ಕಾರಣ ಅರ್ಜುನನ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೇನೆ. ಈ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಚಿಕ್ಕಂದಿನಿಂದಲೂ ಅರ್ಜುನನ ಜತೆಯೇ ಬೆಳೆದಿದ್ದೇನೆ. ಅವನು ನನಗೆ ಸಹೋದರನ ರೀತಿ. ಅರ್ಜುನನ ಮಾವುತನಾಗಿ ತಂದೆಯವರು ಬಹಳ ಚೆನ್ನಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಹೆಸರಿಗೆ ಕಳಂಕ ಬರದಂತೆ ನಡೆದುಕೊಳ್ಳುತ್ತೇನೆ. ಅರ್ಜುನ ಈಗ ಶಿಸ್ತಿನ ಸಿಪಾಯಿ ಆಗಿದ್ದಾನೆ. ನಾನು ಹೇಳಿದ ಮಾತುಗಳನ್ನು ಚೆನ್ನಾಗಿ ಪಾಲಿಸುತ್ತಾನೆ. ಈ ಬಾರಿ ದಸರಾದಲ್ಲಿ ಪ್ರಥಮ ಬಾರಿಗೆ ಅಂಬಾರಿ ಹೊತ್ತ ಅರ್ಜುನನ್ನು ಮುನ್ನಡೆಸುವುದು ನನಗೆ ಬಹಳ ಖುಷಿಯ ಸಂಗತಿ ಎಂದು ಸಂತಸ ಹಂಚಿಕೊಂಡರು.

whatsapp-image-2016-10-08-at-8-webಅಂಬಾರಿಗೆ ಸಾರಥಿ ಆಯ್ಕೆ ಹೇಗೆ: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಡೆಯುವ ಆನೆಯೇ ನಮ್ಮ ಕಣ್ಮನಗಳನ್ನು ಸೆಳೆಯುತ್ತದೆ. ಆದರೆ, ಜಂಜೂ ಸವಾರಿಯನ್ನು ಯಾರು ಹೊರುತ್ತಾರೆ ಎಂಬುದನ್ನು ಅಧಿಕಾರಿಗಳೇ ತೀರ್ಮಾನಿಸುತ್ತಾರೆ. ಆನೆಗಳ ಬೆನ್ನ ಮೇಲೆ ನಮ್ದಾ ಎಂಬ ಹೊದಿಕೆಯನ್ನು ಹಾಸಿ ಅದರ ಮೇಲೆ ಮೆತ್ತನೆಯ ಹೊದಿಕೆ ‘ಗಾದಿ’ ಎಂದು ಕರೆಯಲ್ಪಡುವ ಚೌಕಾಕಾರದ ದೊಡ್ಡ ಹೊರೆಯನ್ನು ಹಾಸಲಾಗುತ್ತದೆ. ಇದು ಸುಮಾರು 300 ಕೆಜಿ ತೂಕವಿರುತ್ತದೆ. ಇದರ ಮೇಲೆ ಮರದ ಅಂಬಾರಿಯನ್ನು ಕಟ್ಟಿ ಆನೆಗಳನ್ನು ನಡೆಸಲಾಗುತ್ತದೆ. ಈ ಬಾರಿ ಮರದ ಅಂಬಾರಿಯನ್ನು ರಾಜ ಗಾಂಭೀರ್ಯದಿಂದ ಹೊತ್ತು ಸುಮಾರು ಆರು ಕಿಮೀ ದೂರವನ್ನು ಕಾಲು ಗಂಟೆಯೊಳಗೆ ಕ್ರಮಿಸಿ ಜಂಬೂ ಸವಾರಿಯಂದು ಅಂಬಾರಿ ಹೊರಲು ಸೈ ಎನಿಸಿಕೊಂಡಿದ್ದಾನೆ. ಈ ತಾಲೀಮು ಪ್ರತಿ ವರ್ಷ ನಡೆಯುತ್ತದೆ. ತಾಲೀಮನ್ನು ನೋಡಿ ಅಧಿಕಾರಿಗಳು ಅಂಬಾರಿ ಹೊರುವ ಆನೆಯನ್ನು ಆಯ್ಕೆ ಮಾಡುತ್ತಾರೆ. 2012ರಿಂದ ಅರ್ಜುನನೇ ಜಂಬೂ ಸವಾರಿಯ ಸಾರಥ್ಯ ವಹಿಸುತ್ತಿದ್ದು, ಮುಂದಿನ 10 ವರ್ಷಗಳವರೆಗೆ ಅವನೇ ಆಯ್ಕೆಯಾಗಲಿದ್ದಾನೆ ಎಂದು ಸಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ಶಿಬಿರಗಳಲ್ಲಿ ಆನೆಗಳ ದಿನಚರಿ: ಆನೆಗಳ ಹೊಟ್ಟೆ ತುಂಬಿಸೋದು ಬಹಳ ಕಷ್ಟದ ಕೆಲಸ. ಬೆಳಗ್ಗೆಯಿಂದ ಸಂಜೆವರೆಗೆ ಅದರ ಹೊಟ್ಟೆಗೆ ಏನಾದರೂ ಹಾಕುತ್ತಲೇ ಇರಬೇಕೆಂದು ಅಭಿಮನ್ಯುವಿನ ಮಾವುತ ವಸಂತ ಹೇಳುತ್ತಾರೆ. ಬೆಳಗ್ಗೆ 6 ಗಂಟೆಗೆ ಆನೆಯ ಹೊಟ್ಟೆ ತುಂಬಿಸೋ ಕಾರ್ಯ ಶುರುವಾಗುತ್ತದೆ. ಮೊದಲಿಗೆ ಫಸಲು ರೇಷನ್‍(ಕಾಳು-ಕುಚ್ಚಲಕ್ಕಿ ಸೇರಿಸಿ ಮಾಡಿರೋ ಆಹಾರ) ಕೊಡಲಾಗುತ್ತದೆ. 10 ಗಂಟೆಗೆ ಬತ್ತ ಮತ್ತು ಹುಲ್ಲು ನೀಡಲಾಗುತ್ತದೆ. ಮಧ್ಯಾಹ್ನದಿಂದ ಆವಾಗವಾಗ ಸೊಪ್ಪು, ಹಸಿಹುಲ್ಲು. ಮತ್ತೆ ರಾತ್ರಿ ಫಸಲು ರೇಷನ್ ನೀಡಲಾಗುತ್ತದೆ. ಮೊದಲಾದರೆ ಮರದ ದಿಮ್ಮಿಗಳನ್ನು ಎಳೆಯುವ ಕಾರ್ಯಕ್ಕೆ ಆನೆಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಕಾಡಾನೆಗಳನ್ನು, ಹುಲಿಗಳನ್ನು ಹಿಡಿಯುವ ಕಾರ್ಯಾಚರಣೆಗಳಷ್ಟೆ ಬಳಸಲಾಗುತ್ತಿರುವುದರಿಂದ ಉಳಿದ ಸಮಯದಲ್ಲಿ ಆನೆಗಳು ಶಿಬಿರದಲ್ಲೇ ಇರುತ್ತವೆ.

ಬಾಂಗಲ್ಯ ಭಾಷೆ: ಆನೆಗಳ ಮಾವುತರು ಜೇನು ಕುರುಬ ಜನಾಂಗಕ್ಕೆ ಸೇರಿದವರಾಗಿದ್ದು, ಬಾಂಗಲ್ಯ ಎಂಬ ಭಾಷೆಯಲ್ಲಿ ಮಾತನಾಡುತ್ತಾರೆ. ಆನೆಗಳಿಗೂ ಅಷ್ಟೇ ಬಾಂಗಲ್ಯ ಭಾಷೆಯಲ್ಲಿ ಮಾತನಾಡಿದರೆ ಅರ್ಥವಾಗುತ್ತದೆ. ಅಲ್ಲದೆ, ಮಾವುತರು ಬಳಸುವ ಕೆಲ ಹಿಂದಿ ಪದಗಳು ಕೂಡ ಆನೆಗಳಿಗೆ ಅರ್ಥವಾಗುತ್ತದೆ. ಸಲಾಂ, ಉಠ್, ಬೈಠ್ ಮೊದಲಾದ ಪದಗಳನ್ನು ಮಾವುತ ಹೇಳಿದರೆ ಸಾಕು, ಆನೆಗಳು ಚಾಚೂ ತಪ್ಪದೆ ಪಾಲಿಸುತ್ತವೆ.

ಅಂಬಾರಿ ಹೊತ್ತ ಆನೆಗಳು: ಮೊದಲು ಅಂಬಾರಿ ಹೊತ್ತ ಜಯಮಾರ್ತಾಂಡ ಆನೆಯು ಸುಮಾರು 45 ವರ್ಷಗಳ ಕಾಲ ಅಂಬಾರಿಯನ್ನು ಹೊತ್ತು ಕೃಷ್ಣದೇವರಾಯರ ನೆಚ್ಚಿನ ಆನೆಯಾಗಿತ್ತು. 1902ರಿಂದ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್ ರಾಜ್, ಐರಾವತ, ಗಜೇಂದ್ರ, ಬಿಳಿಗಿರಿ, ರಾಜೇಂದ್ರ, ದ್ರೋಣ, ಅರ್ಜುನ, ಬಲರಾಮ ಆನೆಗಳು ಅಂಬಾರಿ ಹೊತ್ತಿದ್ದವು.

ಸಂಧ್ಯಾ ಎನ್.ಎ.

 

Leave a Reply

comments

Related Articles

error: