ದೇಶಪ್ರಮುಖ ಸುದ್ದಿ

ಕೋವಿಂದ್ ರಾಷ್ಟ್ರದ 14ನೇ ರಾಷ್ಟ್ರಪತಿಯಾಗುವುದಕ್ಕೆ ಹಾದಿ ಬಹುತೇಕ ಸುಗಮ

ದೇಶ(ನವದೆಹಲಿ)ಜೂ.22:- ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ರಾಮ್‌ನಾಥ್ ಕೋವಿಂದ್ ರಾಷ್ಟ್ರದ 14ನೇ ರಾಷ್ಟ್ರಪತಿಯಾಗುವುದಕ್ಕೆ ಹಾದಿ ಬಹುತೇಕ ಸುಗಮವಾಗಿದೆ.
ಕೋವಿಂದ್ ದಲಿತರು ಎಂಬ ಟ್ರಂಪ್‌ಕಾರ್ಡನ್ನು ಎಸೆದಿರುವ ಚಾಣಾಕ್ಷ ರಾಜಕಾರಣಿಗಳು ಎಂಬ ಖ್ಯಾತಿಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಷಾ ಅವರ ತಂತ್ರಗಾರಿಕೆ ಈ ವಿಚಾರದಲ್ಲೂ ಯಶಸ್ಸು ಕಾಣುವುದು ನಿಶ್ಚಿತವಾಗಿದೆ. ಒಂದು ಕಾಲಕ್ಕೆ ನರೇಂದ್ರಮೋದಿ ಅವರ ರಾಜಕೀಯ ವೈರಿ ಎಂದೇ ಗುರುತಿಸಿಕೊಂಡಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ರಾಮ್‌ನಾಥ್ ಕೋವಿಂದ್ ಅವರನ್ನು ಬೆಂಬಲಿಸಿರುವುದು ಕೋವಿಂದ್ ಅವರ ಗೆಲುವು ಸುಲಭ ಸಾಧ್ಯ ಎಂಬ ಸಂದೇಶವನ್ನು ರವಾನಿಸಿದೆ. ಎಐಎಡಿಎಂಕೆ (ಅಮ್ಮ) ಬಣ ಸಹ ಕೋವಿಂದ್ ಅವರಿಗೆ ಬೆಂಬಲ ಘೋಷಿಸಿರುವುದು ದಕ್ಷಿಣ ಭಾರತದಲ್ಲೂ ಪ್ರತಿಪಕ್ಷಗಳಲ್ಲಿ ಒಡಕು ಉಂಟಾಗಿರುವುದು ಸ್ಪಷ್ಟವಾಗಿದೆ. ಡೋಲಾಯ ಮನಸ್ಥಿತಿಯಲ್ಲಿರುವ ಕಾಂಗ್ರೆಸ್ ನೇತೃತ್ವದ ಮಿತ್ರ ಪಕ್ಷಗಳು ಗುರುವಾರ ದೆಹಲಿಯಲ್ಲಿ ಸಭೆ ಸೇರಲಿವೆಯಾದರೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಕಣಕ್ಕಿಳಿಸಬೇಕೆಂದಿರುವ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ, ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರುಗಳಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಪಿಎಂ ನಾಯಕ ಡಿ. ರಾಜ ಅವರನ್ನು ಕಣಕ್ಕಿಳಿಸಬೇಕೆಂಬ ಪ್ರಯತ್ನಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿಲ್ಲ. ಈ ನಡುವೆ ಸಮಾಜವಾದಿ ಪಕ್ಷದಲ್ಲೂ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಒಡಕು ಉಂಟಾಗಿದ್ದು, ಮುಲಾಯಂ ಸಿಂಗ್ ಯಾದವ್ ಅವರು ಕೋವಿಂದ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿವೆ. ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿ.ಆರ್.ಎಸ್. ಮುಖ್ಯಸ್ಥ ಚಂದ್ರಶೇಖರ್ ರಾವ್, ಎನ್‌ಡಿಎ ಕೂಟದಲ್ಲೇ ಇರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈಗಾಗಲೇ ಕೋವಿಂದ್ ಬೆಂಬಲಕ್ಕೆ ನಿಂತಿರುವುದು ಎನ್‌ಡಿಎ ಅಭ್ಯರ್ಥಿಗೆ ಗೆಲುವನ್ನು ಸುಲಭವನ್ನಾಗಿಸಿದೆ. ಬಿಎಸ್‌ಪಿ ನಾಯಕಿ ಹಾಗೂ ದಲಿತ ಸಮುದಾಯಕ್ಕೆ ಸೇರಿದ ಮಾಯಾವತಿ ಅವರು ಸ್ಪಷ್ಟ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಗೊಂದಲಕ್ಕೆ ಬಿದ್ದಂತೆ ಕಾಣುತ್ತಿದೆ.
ಕೋವಿಂದ್ ದಲಿತ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಬೇಕೆಂದು ಒಲವು ಇದ್ದರೂ ಇನ್ನೂ ಬಹಿರಂಗಪಡಿಸಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಈ ವಿಚಾರದಲ್ಲೂ ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ರಾಜಕೀಯ ಕಾರಣಗಳಿಗಾಗಿ ಎನ್‌ಡಿಎ ಅಭ್ಯರ್ಥಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ ಚಿಂತನೆ ಮಾಡುತ್ತಿದ್ದರೂ ಅವರ ನಿಲುವಿಗೆ ವ್ಯಾಪಕ ಬೆಂಬಲ ವ್ಯಕ್ತವಾಗದಿರುವುದು ಕೋವಿಂದ್ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಿಣುಕಾಡುವಂತಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: