ಮೈಸೂರು

ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಸಹಕರಿಸಿ : ಮಾದೇಗೌಡ ಮನವಿ

ಮೈಸೂರು.ಜೂ.22 : ಎನ್.ಟಿ.ಎಂ. ಶಾಲೆಯನ್ನು ಸ್ವಾಧೀನಪಡಿಸಿಕೊಳ್ಳು ಹೈಕೋರ್ಟ್ ರಾಮಕೃಷ್ಣ ಆಶ್ರಮಕ್ಕೆ ಹಕ್ಕು ನೀಡಿದ್ದರು. ಕೆಲವರು ಮಾಧ್ಯಮದ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಆಕ್ಷೇಪಿಸಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನೀಡಲು ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಶ್ರೀರಾಮಕೃಷ್ಣಾಶ್ರಮಕ್ಕೆ ಹಕ್ಕು ನೀಡಿದೆ. ಆದರೆ ಶಿಕ್ಷಣ ಇಲಾಖೆ ಈ ಆದೇಶಕ್ಕೆ ವಿರುದ್ಧವಾಗಿ ಎನ್.ಟಿ.ಎಂ. ಶಾಲೆ ಕಾರ್ಯನಿರ್ವಹಿಸಲು ಮುಂದಾಗಿತ್ತು ಎಂದರು.

ಶಿಕ್ಷಣ ಇಲಾಖೆಯ ಈ ಕ್ರಮದ ವಿರುದ್ಧ ಆಶ್ರಮವೂ ಹೈಕೋರ್ಟ್ ಮೊರೆ ಹೋಗಿದ್ದರಿಂದ ವಿಚಾರಣೆ ನಡೆಸಿದ ನ್ಯಾಯಾಲಯವೂ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನೀಡಿರುವ ಆದೇಶವನ್ನು ಎತ್ತಿ ಹಿಡಿಯಿತು. ಜತೆಗೆ ಈಗಾಗಲೇ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ಬಾರಿ ತಳ್ಳಿ ಹಾಕಿದ್ದಲ್ಲದೇ 5 ಸಾವಿರ ರೂ ದಂಡವನ್ನು ವಿಧಿಸಿದೆ. ಬಾಲ ನ್ಯಾಯಮಂಡಳಿಯಲ್ಲಿ ನೀಡಿದ ದೂರು ಕೂಡ ಮುಕ್ತಾಯವಾಗಿದ್ದು ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ವಿವರಿಸಿದರು.

ಶಿಕ್ಷಣ ಇಲಾಖೆ ಈಗಲಾದರೂ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಎನ್.ಟಿ.ಎಂ ಶಾಲೆ ಸ್ಥಳ ತೆರವುಗೊಳಿಸಿ ಸಹಕಾರ ನೀಡಬೇಕೆಂದು ಒತ್ತಾಯಿಸಿದ ಅವರು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 5 ಕೋಟಿ ರೂ ಮಂಜೂರು ಮಾಡಿದ್ದು ಈಗಾಗಲೇ 25 ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.

ವಕೀಲ ಅರುಣ್ ಕುಮಾರ್ ಮಾತನಾಡಿ ಎನ್.ಟಿ.ಎಂ. ಶಾಲೆಯನ್ನು ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸಲು ಆದೇಶ ನೀಡಿದ್ದರು ಮುಖ್ಯಮಂತ್ರಿಗಳು ಮತ್ತೆ ಅದೇ ಸ್ಥಳದಲ್ಲಿ ಶಾಲೆ ನಡೆಸುವಂತೆ ಈ ಹಿಂದೆ ಮೌಖಿಕ ಸಂದೇಶ ನೀಡಿದ್ದರೆನ್ನಲಾಗಿದೆ. ಆದರೆ ಈಗ ನ್ಯಾಯಾಲಯದ ತೀರ್ಪು ಬಂದಿರುವುದರಿಂದ ಎನ್.ಟಿ.ಎಂ. ಶಾಲೆಯಲ್ಲಿಯೇ ತರಗತಿ ನಡೆಸಿದರೆ ಅದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ ಎಂದರು.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, (ಸಿ.ಪಿ.ಕೆ), ನಿವೃತ್ತ ಅಧಿಕಾರಿ ಚಕ್ರವರ್ತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: