ದೇಶಪ್ರಮುಖ ಸುದ್ದಿವಿದೇಶ

ಇರಾಕ್ ಪ್ರಾಚೀನ ಪಟ್ಟಣ ಮೊಸೂಲ್‍ನಲ್ಲಿ 800 ವರ್ಷ ಹಳೆಯ ಮಸೀದಿಯನ್ನೇ ಸ್ಫೋಟಿಸಿದ ಉಗ್ರರು

ಬಾಗ್ದಾದ್, ಜೂ.22 : ಪಿಶಾಚಿಗಳ ಪ್ರತಿರೂಪದಂತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ಇರಾಕ್‍ನ ಮೊಸುಲ್ ಪಟ್ಟಣದಲ್ಲಿರುವ 800 ವರ್ಷ ಹಳೆಯದಾದ ಮೀನಾರು ಮತ್ತು ಪ್ರಾಚೀನ ಮಸೀದಿಯನ್ನು ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ.

2014ರಲ್ಲಿ ಐಸಿಸ್ ನಾಯಕ ಅಬು ಬಕ್ರ್ ಅಲ್-ಬಾಗ್ದಾದಿ ತನ್ನನ್ನು ತಾನು ಖಲೀಫಾ – ಇಸ್ಲಾಂ ಧಾರ್ಮಿಕ ಮುಖಂಡ ಎಂದು ಈ ಮಸೀದಿಯಲ್ಲೇ ಘೋಷಿಸಿಕೊಂಡಿದ್ದ. ಬಾಗ್ದಾದಿ ಕೊನೆಯ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಈ ಮಸೀದಿಯಲ್ಲೇ. ನಂತರ ಆತ  ಗೋಪ್ಯವಾಗಿಯೇ ಉಳಿದಿದ್ದ.

ಇರಾಕ್‍ನ ಎರಡನೇ ಅತಿದೊಡ್ಡ ಪಟ್ಟಣ ಮೊಸುಲ್‍ನ ಎಂಟು ಶತಮಾನಗಳಷ್ಟು ಹಳೆಯದಾದ ಈ ಮಸೀದಿ ಐಸಿಸ್ ಉಗ್ರರ ಆರ್ಭಟಕ್ಕೆ ಧರೆಗುರುಳಿವೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಅಮೆರಿಕವೇ ಕಾರಣ ಐಸಿಸ್ ಆರೋಪಿಸಿದೆ. ಅಮಾಖ್ ಪ್ರಚಾರ ಸಂಸ್ಥೆ ಮೂಲಕ ಕ್ಷಿಪ್ರ ಹೇಳಿಕೆ ನೀಡಿದ ಉಗ್ರರು, ಈ ದಾಳಿಗೆ ಅಮೆರಿಕವೇ ಹೊಣೆ ಎಂದು ಆರೋಪಿಸಿದ್ದಾರೆ. ಆದರೆ “ಇದು ಮೊಸುಲ್ ಪಟ್ಟಣ ಮತ್ತು ಇರಾಕ್ ವಿರುದ್ಧ ನಡೆದ ಘೋರ ಅಪರಾಧ” ಎಂದು ಟೀಕಿಸಿರುವ ಅಮೆರಿಕ ನೇತೃತ್ವದ ಮಿತ್ರಪಡೆಗಳು ಉಗ್ರರ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದು, ಕೃತ್ಯವನ್ನು ಖಂಡಿಸಿವೆ.

ಇರಾಕ್ ಪ್ರಧಾನಮಂತ್ರಿ ಹೈದರ್ ಅಲ್ ಅಬಾದಿ ಅವರು ಐಎಸ್ ಉಗ್ರರ ಕೃತ್ಯವನ್ನು ಖಂಡಿಸಿದ್ದಾರೆ. ಮೊಸುಲ್‍ ವಶಪಡಿಸಿಕೊಳ್ಳಲು ಎಂಟು ತಿಂಗಳಿನಿಂದ ಪ್ರಯತ್ನಪಡುತ್ತಿರುವ ಜಿಹಾದಿಗಳು ತಮ್ಮ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಾದ ಕಾರಣ ಇಂತಹ ಹತಾಶೆಯ ಕೃತ್ಯ ಎಸಗಿದ್ದಾರೆ. ಐಎಸ್ ಉಗ್ರರು ಈ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದೂ ಅವರು ಛೇಡಿಸಿದ್ದಾರೆ.

ಮೊಸುಲ್ ಪಟ್ಟಣವನ್ನು ಉಗ್ರರಿಂದ ವಶಪಡಿಸಿಕೊಳ್ಳುವ ಸಲುವಾಗಿ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಇರಾಕ್ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಬ್ದುಲ್‍ಅಮಿರ್ ಯಾರಲ್ಲಾ ಅವರು ಹೇಳಿಕೆ ನೀಡಿದ್ದು, ಪ್ರಾಚೀನ ನಗರದ ಅತ್ಯಂತ ಒಳಭಾಗದತ್ತ ನಮ್ಮ ಸೇನಾಪಡೆಗಳು ಮುನ್ನುಗ್ಗಿದ್ದವು. ಇನ್ನೇನು ನೂರಿ ಮಸೀದಿ ಬಳಿ ತಲುಪುವಷ್ಟರಲ್ಲಿ ಉಗ್ರರು ನೂರಿ ಮತ್ತು ಹದ್ಬಾ ಮಸೀದಿಗಳನ್ನು ಸ್ಫೋಟಿಸಿದರು. ಈ ಮೂಲಕ ಇತಿಹಾಸಕ್ಕೆ ಘೋರ ಅನ್ಯಾಯ ಬಗೆದು ರಣಹೇಡಿಗಳಂತೆ ವರ್ತಿಸಿದ್ದಾರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: