ಕರ್ನಾಟಕ

ಗೋವುಗಳನ್ನು ರಕ್ಷಿಸುವ ಕೆಲಸವಾಗಬೇಕು : ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ

ರಾಜ್ಯ(ಬೆಂಗಳೂರು)ಜೂ.22:-  ಹಿಂದೂ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಗೋವುಗಳನ್ನು ಪೂಜನೀಯ ಸ್ಥಾನದಲ್ಲಿರಿಸಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶ್ರೀ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ತಿಪಟೂರು ತಾಲೂಕಿನ ಬಿದರೆಗುಡಿಯ ಶ್ರೀ ಬಿದರೆಯಮ್ಮ ದೇವಾಲಯದ ಆವರಣದಲ್ಲಿ ಗೋಶಾಲೆಯ ಪ್ರಾರಂಭೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಗುವು ಜನಿಸಿದಾಗ ತಾಯಿಯ ಹಾಲನ್ನು ನಂತರದಲ್ಲಿ ಗೋಮಾತೆಯ ಹಾಲನ್ನು ಕುಡಿದು ಬೆಳೆಯುತ್ತಾನೆ. ಅಂತಹ ಗೋವಿಗೆ ನಮ್ಮ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನವನ್ನು ನೀಡಿದ್ದು ಅವುಗಳ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮನುಷ್ಯನಿಗಾಗಿ ತನ್ನ ಜೀವನವನ್ನೇ ಮುಡುಪಾಗಿಡುವ ಗೋವುಗಳ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯು ನಮ್ಮ ಮೇಲಿದೆ. ಗೋವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಗೋವುಗಳಿಗೆ ಮೇವಿನ ದಾನವನ್ನು ನೀಡಲು ಮುಂದಾಗಿರುವ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಉತ್ತಮ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯ ಗ್ರಾಮಸ್ಥರು ಸಹ ಉತ್ತಮ ಸಹಕಾರ ನೀಡುವ ಮುಖಾಂತರ ಗೋಶಾಲೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಅವಶ್ಯಕತೆಯಿದೆ ಎಂದರು.
ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಮಾತನಾಡಿ, ಕಸಬಾ ಹೋಬಳಿಯ ಹಾಗೂ ಸುತ್ತಮುತ್ತಲಿನಲ್ಲಿ ಬರ ತೀವ್ರವಾಗಿದ್ದು, ಪಶುಪಾಲನೆಗೆ ತುಂಬಾ ತೊಂದರೆ ಇದೆ. ಸರ್ಕಾರ ಈ ಭಾಗದ ಅಯ್ಯನಬಾವಿ ಬಳಿ ತೆರೆದಿದ್ದ ಗೋಶಾಲೆಯನ್ನು ಸಹ ಏಕಾಏಕಿ ಮುಚ್ಚಿದ್ದರಿಂದ ಜಾನುವಾರುಗಳಿಗೆ ಮೇವಿನ ಅಭಾವ ವಿಪರೀತವಾಗಿದೆ. ಸರ್ಕಾರ ಜಾನುವಾರುಗಳಿಗೆ ಇನ್ನೂ ಒಂದು ತಿಂಗಳು ಗೋಶಾಲೆಯನ್ನು ಮುಂದುವರಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಈ ಬಗ್ಗೆ ಶಾಸಕರು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ರೈತರಿಗೆ ನೆರವಾಗಬೇಕಿತ್ತು. ಏಕಾಏಕಿ ನಿಲ್ಲಿಸಿದ್ದರಿಂದ ಕೆಲ ಗೋವುಗಳು ಸಾವನ್ನಪ್ಪಿವೆ. ಸಾಕಷ್ಟು ಬಡ ರೈತರಿಗೆ ಮೇವು ಖರೀದಿಸಲು ಸಾಧ್ಯವಾಗದೆ ಇರುವುದನ್ನು ನಾನು ಮನಗಂಡು ಹಾಗೂ ತಾಲೂಕಿನ ಗೋಸಂಪತ್ತು ಮೇವು, ನೀರಿಲ್ಲದೆ ಜೀವ ಬಿಡಬಾರದು ಎಂಬುದನ್ನು ಮನಗಂಡು ನನ್ನ ಸ್ವಂತ ಖರ್ಚಿನಲ್ಲಿ ಮುಂದಿನ 20 ದಿನಗಳ ಕಾಲ ಗೋಶಾಲೆಯನ್ನು ನಡೆಸುವ ಚಿಂತನೆ ನಡೆಸಿ ಈ ಗೊಶಾಲೆಯನ್ನು ಪ್ರಾರಂಭಿಸಿದ್ದೇನೆ. ನಮ್ಮ ರೈತರಿಗೆ ಗೋಸಂಪತ್ತೇ ಬದುಕಿನ ಆಸರೆಯಾಗಿದ್ದು, ಗೋಸಂಪತ್ತು ನಾಶವಾದರೆ ರೈತನ ಬದುಕೂ ನಾಶವಾದಂತೆ  ಗೋಶಾಲೆ ತೆರೆಯುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರು ಮಾತ್ರ ಇದರ ಉಪಯೋಗ ಪಡೆದುಕೊಳ್ಳಬೇಕು. ಗೋಶಾಲೆಯಲ್ಲಿ ಸುಮಾರು 450ಕ್ಕೂ ಹೆಚ್ಚು ಗೋವುಗಳು ಆಗಮಿಸಿದ್ದು ಎಲ್ಲಾ ಗೋವುಗಳಿಗೆ ಸಮರ್ಪಕವಾಗಿ ಮೇವಿನ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಗೌಡನಕಟ್ಟೆ ರಮೇಶ್, ಶಿವರ ಪರಮೇಶ್, ಮಾದಿಹಳ್ಳಿಸ್ವಾಮಿ, ಕರೀಕೆರೆ ಚನ್ನಬಸವಣ್ಣ, ಕೆರೆಗೋಡಿ ಸಂಪತ್‌ಕುಮಾರ್, ಮತ್ತಿಹಳ್ಳಿಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: