
ದೇಶಪ್ರಮುಖ ಸುದ್ದಿ
ರಾಷ್ಟ್ರಪತಿ ಚುನಾವಣೆಗೆ ಜೂನ್ 23 ರಂದು ನಾಮಪತ್ರ ಸಲ್ಲಿಸಲಿರುವ ಎನ್ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್
ನವದೆಹಲಿ, ಜೂ. 17 : ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಅವರು ಜೂನ್ 23 ರಂದು (ನಾಳೆ) ನಾಮಪತ್ರ ಸಲ್ಲಿಸಲಿದ್ದಾರೆ. ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.
ಕೋವಿಂದ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಉಪಸ್ಥಿತರಿರಲಿದ್ದಾರೆ ಎಂದು ತಿಳಿದು ಬಂದಿದೆ.
ನಾಮಪತ್ರ ಸಲ್ಲಿಕೆಗೆ ಬಿಜೆಪಿ ವತಿಯಿಂದ ಸಂಪೂರ್ಣ ಸಿದ್ಧತೆ ನಡೆದಿದೆ. ಒಟ್ಟು ನಾಲ್ಕು ಸೆಟ್ ಗಳ ಪ್ರಸ್ತಾಪ ಅಗತ್ಯವಾಗಿದ್ದು, ಮೊದಲ ಸೆಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜೊತೆಗೂಡಿ ಪ್ರಸ್ತಾಪ ಮಾಡಲಿದ್ದಾರೆ. ಎರಡನೇ ಸೆಟ್ನಲ್ಲಿ ಅಮಿತ್ ಶಾ ಮತ್ತು ಅರುಣ್ ಜೈಟ್ಲಿ ಪ್ರಸ್ತಾಪಿಸಲಿದ್ದಾರೆ.
3ನೇ ಸೆಟ್ನಲ್ಲಿ ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್ ಮತ್ತು ವೆಂಕಯ್ಯನಾಯ್ಡು ಅವರು ಪ್ರಸ್ತಾಪಿಸಲಿದ್ದಾರೆ. 4ನೇ ಸೆಟ್ನಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕೋವಿಂದ್ ಅವರ ಪರವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ.
-ಎನ್.ಬಿ.