ಕರ್ನಾಟಕಪ್ರಮುಖ ಸುದ್ದಿ

ಸಂಪುಟ ವಿಸ್ತರಣೆ ಸನಿಹ : ಈ ಬಾರಿ ಜಾತಿ ಲಾಬಿಯದ್ದೇ ಪ್ರಧಾನ ಪಾತ್ರ?

ಬೆಂಗಳೂರು, ಜೂ.22 : ರಾಜ್ಯ ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆಯಾಗಲಿದ್ದು, ಸಚಿವ ಸ್ಥಾನಾಕಾಂಕ್ಷಿಗಳು ಈಗಾಗಲೇ ಲಾಬಿ ಆರಂಭಿಸಿದ್ದಾರೆ.

ಜೂ. 26, 27 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಬಹುದು ಎನ್ನಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸ್ಥಾನಾಕಾಂಕ್ಷಿಗಳನ್ನು ಸಮಾಧಾನಪಡಿಸಿ ಸಾಧ್ಯವಾದಷ್ಟು ಸಮಾಧಾನಕರ ಆಯ್ಕೆ ನಡೆಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆ ಶಾಸಕರಾಗಿದ್ದ ಸಚಿವ ಮಹದೇವಪ್ರಸಾದ್ ಅವರ ನಿಧನ, ಎಚ್.ವೈ.ಮೇಟಿ ಮತ್ತು ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ಮೂರು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶವಿದ್ದು, ಖಾಲಿಯಾಗಿರುವ ಸ್ಥಾನಗಳನ್ನು ಅದೇ ಜಾತಿಯವರಿಗೆ ನೀಡಲು ಮುಖ್ಯಮಂತ್ರಿಯವರು ಒಲವು ತೋರಿದ್ದಾರೆ. ಹೀಗಾಗಿ ಅದೇ ಜಾತಿಯ ಶಾಸಕರುಗಳು ತಮ್ಮ ಹಕ್ಕು ಮಂಡಿಸಿದ್ದು, ಸಿಎಂ ಹಾಗೂ ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ.

ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಗೀತಾ ಅವರಿಗೆ ಸಚಿವ ಸ್ಥಾನ ನೀಡಿದರೆ ಮಹಿಳೆಯರಿಗೆ ಆದ್ಯತೆ ಕೊಟ್ಟ ಜೊತೆಗೆ ಚಾಮರಾಜನಗರ ಜಿಲ್ಲೆಗೆ ಮತ್ತು ಲಿಂಗಾಯಿತರಿಗೆ ಪ್ರಾಮುಖ್ಯತೆ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿದ್ದಾರೆ.

ಆದರೆ, ಲಿಂಗಾಯತರ ಪ್ರಾತಿನಿಧ್ಯದಲ್ಲಿ ಷಡಕ್ಷರಿ ಅವರೂ ಕೂಡ ಆಕಾಂಕ್ಷಿಗಳಾಗಿದ್ದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ. ಅದೇ ರೀತಿ ಎಚ್.ವೈ. ಮೇಟಿಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರ ಹೆಸರು ಕೇಳಿಬಂದಿದೆ. ಆದರೆ ಎಚ್.ವೈ.ಮೇಟಿಯವರನ್ನೇ ಮತ್ತೆ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

ದಲಿತ ಸಮುದಾಯದಿಂದ ಪಿ.ಎಂ.ನರೇಂದ್ರಸ್ವಾಮಿ, ಆರ್.ಬಿ.ತಿಮ್ಮಾಪುರ್, ಧರ್ಮಸೇನ ಅವರು ಪೈಪೋಟಿ ನಡೆಸುತ್ತಿದ್ದಾರೆ. ಕುರುಬ ಸಮುದಾಯದಿಂದ ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಡಿ.ಜಿ.ಗೋವಿಂದಪ್ಪ, ಎಚ್.ಎಂ.ರೇವಣ್ಣ, ಬಸವರಾಜ ಶಿವಣ್ಣನವರ್ ಅವರುಗಳು ಪ್ರಯತ್ನ ನಡೆಸಿದ್ದರೆ ಲಿಂಗಾಯತ ಸಮುದಾಯದಿಂದ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಅಪ್ಪಾಜಿ ನಾಡಗೌಡ, ಡಿ.ಎಂ.ಇನಾಂದಾರ್, ಅಶೋಕ್‍ಪಟ್ಟಣ್, ಡಾ.ಎ.ಬಿ.ಮಾಲಕರೆಡ್ಡಿ ಅವರುಗಳ ಹೆಸರುಗಳು ಕೇಳಿ ಬಂದಿವೆ.

ಯಾವುದೇ ಆಕ್ಷೇಪ ವ್ಯಕ್ತವಾಗದಿದ್ದರೆ ಅವರನ್ನೇ ನೇಮಕ ಮಾಡಿಕೊಳ್ಳುವ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಆರೋಗ್ಯ ಸಚಿವರಾಗಿರುವ ರಮೇಶ್‍ಕುಮಾರ್ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಿ ಅವರ ಸ್ಥಾನಕ್ಕೆ ನರೇಂದ್ರಸ್ವಾಮಿಯವರನ್ನು ನೇಮಕ ಮಾಡುವ ಯೋಚನೆ ಮುಖ್ಯಮಂತ್ರಿಯವರದ್ದಾಗಿದೆ.

ಆರ್.ಬಿ.ತಿಮ್ಮಾಪುರ್, ಧರ್ಮಸೇನ ಅವರೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪರಮೇಶ್ವರ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಪರಿಶಿಷ್ಟ ಜಾತಿಯಿಂದ ನರೇಂದ್ರ ಸ್ವಾಮಿ ಹಾಗೂ ತಿಮ್ಮಾಪುರ್, ಧರ್ಮಸೇನ ಅವರೆಲ್ಲರೂ ಕೂಡ ಪೈಪೋಟಿ ನಡೆಸಿದ್ದಾರೆ.

ಪ್ರಸ್ತುತ ಮೂರು ಸಚಿವರನ್ನಷ್ಟೇ ನೇಮಿಸಿಕೊಳ್ಳಲು ಅವಕಾಶವಿದ್ದು, ಚುನಾವಣೆ ವರ್ಷವಾದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸ್ಥಾನಾಕಾಂಕ್ಷಿಗಳನ್ನು ಹೇಗೆ ಸಮಾಧಾನಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈಗ ಇರುವ 7 ಸಚಿವರ ರಾಜೀನಾಮೆ ಪಡೆದು ಒಟ್ಟು 10 ಮಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲಾಗುವುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಚುನಾವಣೆ ವರ್ಷವಾದ್ದರಿಂದ ಸಚಿವ ಸ್ಥಾನ ಕಳೆದುಕೊಂಡವರು ಅಸಮಾಧಾನಗೊಳ್ಳಬಹುದು ಎಂಬ ಆತಂಕವೂ ಇರುವುದರಿಂದ ಈ ಸಾಹಸವನ್ನು ಮುಖ್ಯಮಂತ್ರಿಗಳು ಕೈಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

-ಎನ್.ಬಿ.

Leave a Reply

comments

Related Articles

error: