ಕರ್ನಾಟಕ

ಜು.1: ರಾಜ್ಯಮಟ್ಟದ ಜೆಡಿಎಸ್ ಸಮಾವೇಶ

ರಾಜ್ಯ(ರಾಯಚೂರು)ಜೂ.22:- ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಿರುವ ಸಂವಿಧಾನ ಬದ್ಧ ಮೀಸಲಾತಿ ಎಲ್ಲಾ ರಂಗದಲ್ಲಿ ಕಸಿಯಲಾಗುತ್ತಿರುವ ಧೋರಣೆ ಖಂಡನೀಯ.  ರಾಜಕೀಯ ದೃವೀಕರಣದೊಂದಿಗೆ ಸಮಾಜ ಒಳಿತಿನ ಹಲವು ನಿರ್ಣಯ ಕೈಗೊಳ್ಳಲು ಜುಲೈ 1 ರಂದು ದಾವಣಗೆರೆ ಪ್ರೌಢ ಶಾಲೆ ಮೈದಾನದಲ್ಲಿ  ರಾಜ್ಯಮಟ್ಟದ ಜೆಡಿಎಸ್ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರದೇಶ (ಜಾತ್ಯಾತೀತ ದಳ) ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ ಹೇಳಿದರು.

ನಗರದಲ್ಲಿ ನಡೆದ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು, ಶೋಷಿತರನ್ನು ಅಭಿವೃದ್ಧಿ ಹೆಸರಲ್ಲಿ ಮೀಸಲಾತಿ ನೀಡದೆ ವಂಚಿಸುತ್ತಿದೆ. ಸಮುದಾಯಕ್ಕೆ ಮೀಸಲಾದ ಸಂವಿಧಾನ ಬದ್ಧ ಮೀಸಲಾತಿಯನ್ನು ಇತರೆ ಸಮಾಜ ಹಂತ ಹಂತವಾಗಿ ಎಲ್ಲಾ ರಂಗಗಳಲ್ಲಿ ಕಸಿಯಲಾಗುತ್ತಿರುವುದು ಖಂಡನೀಯ. ಸಾಮಾಜಿಕ, ಪ್ರಾದೇಶಿಕ ಅಸಮತೋಲನ ನಿರ್ಧಾರಗಳು ರಾಜ್ಯದ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ದೇಶದ ಬೆನ್ನೆಲುಬಾಗಿರುವ ರೈತಾಪಿ ವರ್ಗವನ್ನು ಸಂಪೂರ್ಣ ಕಡೆಗಣಿಸಿದ ಸರ್ಕಾರಗಳ ಮೃದು ಧೋರಣೆಯಿಂದಾಗಿ ಅನ್ನದಾತರು ಸರಣಿ ಆತ್ಮಹತ್ಯೆಗೀಡಾಗುವಂತಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ರೈತ ನಿರ್ಲಕ್ಷ್ಯೆ, ಅಭಿವೃದ್ಧಿ ಮಾರಕ ನಿರ್ಣಯಗಳು ರಾಜ್ಯದ ಜನತೆಯಲ್ಲಿ ತೀವ್ರ ಆತಂಕಕ್ಕೆ ದಾರಿ ಮಾಡಿದೆ. ಜಾದಳ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತಾಪಿ ವರ್ಗದಿಂದಿಡಿದು ಎಲ್ಲಾ ವರ್ಗದ ವಲಯಗಳಿಗೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು.

ಶೋಷಿತ ಜಾತಿ ಮೇಲೆ ಅಪಾರ ಕಾಳಜಿ ಹೊಂದಿರುವ ಮೇಲ್ಕಂಡವರನ್ನು ಗೌರವಿಸಿ ವಾಲ್ಮೀಕಿ ಸಮಾಜ ಅಭಿವೃದ್ಧಿ ಹೊಂದುವ ಮಹತ್ವದ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಜು.1 ರಂದು ಸಮಾವೇಶಕ್ಕೆ ಮುಂದಾಗಲಾಗಿದೆ. ಎರಡು ಲಕ್ಷಕ್ಕೂ ಅಧಿಕ ಜನತೆ ಭಾಗವಹಿಸುವ ನಿರೀಕ್ಷೆಯಿದ್ದು, ಜಿಲ್ಲೆಯ ವಾಲ್ಮೀಕಿ ಸಮುದಾಯದ ಬಾಂಧವರು ಅಂದು ನಡೆಯುವ ಸಮಾವೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೆ ಭಾಜನರಾಗುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಜಾದಳ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಜಿ.ಪಂ.ಸದಸ್ಯ ಖಾಸಿಂ ನಾಯಕ, ನಗರಸಭೆ ಸದಸ್ಯ ಪಿ.ಯಲ್ಲಪ್ಪ, ಮುಖಂಡರಾದ ರಾಜಾ ವೆಂಕಟಪ್ಪ ನಾಯಕ, ಸೈಯದ್ ನಿಜಾಮುದ್ದಿನ್, ದಾನಪ್ಪ ಆಲ್ಕೋಡ್, ದಾನಪ್ಪ ಯಾದವ್, ನರಸಿಂಹ ನಾಯಕ, ಮಲ್ಲಿಕಾರ್ಜುನ ಬಲ್ಲಟಗಿ, ಎನ್.ಶಿವಶಂಕರ ವಕೀಲರು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: