ಕರ್ನಾಟಕ

ನಿವೇಶನಗಳ ಹರಾಜು ಪ್ರಕ್ರಿಯೆ ನಿಯಮ ಬಾಹಿರ : ಕಾನೂನು ಹೋರಾಟದ ಎಚ್ಚರಿಕೆ

ಮಡಿಕೇರಿ ಜೂ.23 : ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹರಾಜು ಹಾಕಲಾಗಿದೆ ಎಂದು ಆರೋಪಿಸಿರುವ ಸ್ಥಳೀಯ ವಕೀಲರಾದ ಆರ್.ಕೆ.ನಾಗೇಂದ್ರಬಾಬು, ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಿಯಮ ಉಲ್ಲಂಘಿಸಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಶ್ರೀಮಂತರಿಗೆ ಅನುಕೂಲ ಕಲ್ಪಿಸಲಾಗಿದ್ದು, ಬಡವರಿಗೆಂದು ಮೀಸಲಿಟ್ಟಿದ್ದ ಜಾಗವನ್ನು ಕಸಿದುಕೊಂಡಂತಾಗಿದೆ ಎಂದು ಆರೋಪಿಸಿದರು. ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಕುಶಾಲನಗರದ ಬಡವರ್ಗದ ಮಂದಿಗೆ ನಿವೇಶನವನ್ನು ಹಂಚುವ ಸಲುವಾಗಿ ಸಣ್ಣ ಹಾಗೂ ಮಧ್ಯಮ ನಗರಗಳ ಸಮಗ್ರಾಭಿವೃದ್ಧಿ ಯೋಜನೆಯಡಿ ಕೇಂದ್ರ ಸರಕಾರದ ಮೂಲಕ 80 ಲಕ್ಷ ರೂ. ಸಾಲವನ್ನು ಪಡೆದು ಜಮೀನನ್ನು ಖರೀದಿಸಲಾಗಿತ್ತು.

ಗುಂಡೂರಾವ್ ಅವರ ಪರಿಕಲ್ಪನೆಯಂತೆ ಈ ಜಮೀನು ನಿವೇಶನಗಳಾಗಿ ಬಡವರಿಗೆ ಹಂಚಿಕೆಯಾಗಬೇಕಾಗಿತ್ತು. ಆದರೆ ನಿವೇಶನಕ್ಕಾಗಿ ಪಟ್ಟಣ ಪಂಚಾಯಿತಿಗೆ ಬಡವರಿಂದ ಸಲ್ಲಿಕೆಯಾಗಿರುವ ಸುಮಾರು 800 ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಐಡಿಎಸ್‍ಎಂಟಿ ಸಮಿತಿ ಹರಾಜು ನಡೆಸಲು ಅವಕಾಶ ನೀಡಿದೆ. ಈ ನಿಯಮ ಬಾಹಿರ ಹರಾಜು ಪ್ರಕ್ರಿಯೆಯಿಂದ ಬಡವರಿಗೆ ಮಾತ್ರವಲ್ಲದೆ ಸರಕಾರದ ಬೊಕ್ಕಸಕ್ಕೆ ಸುಮಾರು 2 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.

ಸಾಲ ತೀರಿಸುವುದಕ್ಕಾಗಿ ಬಡವರ್ಗಕ್ಕೆ ಮೀಸಲಿಟ್ಟಿದ್ದ ನಿವೇಶನಗಳನ್ನು ಧನಿಕರಿಗೆ ಹರಾಜು ಹಾಕುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು ಜಿಲ್ಲಾಧಿಕಾರಿಗಳು ಈಗ ನಡೆದಿರುವ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಿ ಬಡವರಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇಮ ಕುಶಾಲನಗರಕ್ಕಾಗಿ ನಾನು ಸಮಿತಿಯ ಸಂಚಾಲಕರಾದ ಕೆ.ಎಸ್.ನಾಗೇಶ್ ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: