ಪ್ರಮುಖ ಸುದ್ದಿಮೈಸೂರು

ಜಗನ್ಮೋಹನ ಅರಮನೆಯಲ್ಲಿ ಸುಗಮ ಸಂಗೀತ ಧಾರೆ

rekha-1-webರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು….ಸತ್ಯಾ…ನಿತ್ಯಾ.., ಓ ನನ್ನ ಚೇತನ ನೆರೆದಿದ್ದ ಪ್ರೇಕ್ಷಕರಿಗೆ ಕನ್ನಡ ಕವನಗಳ ಮೂಲಕ ಕಿಚ್ಚು ಹಚ್ಚಿದವರು ಸುಗಮ ಸಂಗೀತಗಾರ ಡಾ. ಎ.ಡಿ. ಶ್ರೀನಿವಾಸ.

ನಗರದ ಜಗನ್ಮೋಹನ ಅರಮನೆಯಲ್ಲಿ ಅ.8ರ ಶನಿವಾರ ಸಂಜೆ ನಡೆದ ದಸರಾ ಮಹೋತ್ಸವದ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಸಂತ ಶಿಳುನಾಳ ಷರೀಫರ ಪಾರಮಾರ್ಥಿಕ ತತ್ವ ಗೀತೆಗಳಾದ ಸೋರುತಿಹುದು ಮನೆಯ ಮಾಳಿಗಿ, ಕೋಡಗನ ಕೋಳಿ ನುಂಗಿತ್ತಾ, ವರಕವಿ ದ.ರಾ. ಬೇಂದ್ರೆಯವರ ನೀ ಹಿಂಗಾ ನೋಡ ಬ್ಯಾಡ…, ಜಿ.ಎಸ್. ಶಿವರುದ್ರಪ್ಪ ಅವರ ಎದೆ ತುಂಬಿ ಹಾಡಿದೆನು ಮತ್ತು ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಕಾವ್ಯಗಳನ್ನು ಅದ್ಭುತ ಹಿಮ್ಮೇಳ ಸಂಗೀತದೊಂದಿಗೆ ಡಾ. ಶ್ರೀನಿವಾಸ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಸುಗಮ ಸಂಗೀತದ ಸುಂದರ ಲೋಕವನ್ನೇ ಸೃಷ್ಟಿಸಿದರು. ಇವರ ಗೀತೆಗಳಿಗೆ ನೆರೆದಿದ್ದವರು ಕರತಾಡನಗಳ ಮೂಲಕ ಪ್ರೋತ್ಸಾಹಿಸಿದರು.

ಮೈಸೂರಿನ ಎಸ್.ಜೆ.ಸಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಶ್ರೀನಿವಾಸಗೆ ಮ್ಯಾಡೋಲಿನ್ – ಸಿ. ವಿಶ್ವನಾಥ್, ಕೀ  ಬೋರ್ಡ್ – ಪ್ರಸನ್ನ ಕುಮಾರ್. ತಬಲ – ಇಂದುಶೇಖರ್ ಹಾಗೂ ರಿದಂ ಅಲ್ಲಿ ರಾಘವೇಂದ್ರ ಪ್ರಸಾದ್ ಸಿ.ಆರ್. ಜೊತೆಯಾದರು. 45 ನಿಮಿಷಕ್ಕೂ ಹೆಚ್ಚು ಕಾಲ ಪ್ರೇಕ್ಷಕರಿಗೆ ಕನ್ನಡ ಸಾರಸ್ವತ ಲೋಕದ ದಿಗ್ಗಜರ ಕವನಗಳ ಮೂಲಕ ಸಾಹಿತ್ಯದ ರಸದೌತಣ ನೀಡಿದರು.

ಯಾದಗಿರಿಯ ಬಸವರಾಜ ಬಂಟನೂರ ಮತ್ತು ತಂಡದವರು ವಚನ ಗಾಯನದಲ್ಲಿ ವಿಶ್ವಬಂಧು ಬಸವಣ್ಣ, ಅಲ್ಲಮ ಪ್ರಭು ಹಾಗೂ ಅಕ್ಕ ಮಹಾದೇವಿಯರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇವರಿಗೆ ತಬಲದಲ್ಲಿ ರಮೇಶ್ ಧನ್ನೂರ್, ಶಿವದೇವ ಸ್ವಾಮಿ ನಾವದಗಿ ಹಾರ್ಮೋನಿಯಂ. ತಾನ್ಪುರಗೆ ಪ್ರಭು ಮತ್ತು ಸಹನಾ ಜೊತೆಯಾದರು. ಕನಕದಾಸ, ಪುರಂದರದಾಸರು ರಚಿಸಿರುವ ಕೀರ್ತನೆಗಳ ಗಾಯನವನ್ನು ಮೈಸೂರಿನ ವಿಶ್ವನಾಥ್ ಮತ್ತು ಶಶಿಕಲಾ ಚಂದ್ರಶೇಖರ್ ಅವರ ನಡೆಸಿಕೊಟ್ಟರು. ಮೇರು ಗಾಯಕ ಘಂಟಸಾಲ ಅವರು ಹಾಡಿ ಪ್ರಸಿದ್ಧಗೊಳಿಸಿದ್ದ  ಬದುಕಿದೆನು… ಬದುಕಿದೆನು.. ಭವ ಎನಗಿಂಗಿತು ಹಾಡಿಗೆ ವಿಶ್ವನಾಥ್ ಧ್ವನಿ ನೀಡಿ ನೆರದಿದ್ದ ಪ್ರೇಕ್ಷಕರನ್ನು 7ನೇ ಶತಮಾನಕ್ಕೆ ಸೆಳೆದೊಯ್ಯದರು. ಇವರಿಗೆ ಕೀ ಬೋರ್ಡ್ ನಲ್ಲಿ ಬಾಲಕೃಷ್ಣ, ತಬಲ ಜಗದೀಶ್ ಹಾಗೂ ರಿದಂ ಶ್ರೀನಿವಾಸ ನೀಡಿದರು.

ಬೆಂಗಳೂರಿನ ಸತೀಶ್ ಬಾಬು ಮತ್ತು ತಂಡದವರು ನಡೆಸಿಕೊಟ್ಟ ನೃತ್ಯರೂಪಕ ಭರತನಾಟ್ಯದ ವಿಭಿನ್ನ ವಿನೂತನ ಶೈಲಿ ‘ಬೊಂಬೆ ವೈಭವ’ದಲ್ಲಿ ಪ್ರಸ್ತುತ ಪಡಿಸಿದರು – ಬೊಂಬೆಗಳಂತೆ ನರ್ತಿಸಿ ಪ್ರೇಕ್ಷಕರ ಮನತಣಿಸಿದರು.

ದಸರಾ ಉಪಸಮಿತಿಯ ವಿಶೇಷಾಧಿಕಾರಿ ಎಂ.ಎಸ್. ಲೋಕೇಶ್ ಅವರು ಕಲಾವಿದರನ್ನು ಸನ್ಮಾನಿಸಿದರು. ಓಹಿಲಾ ನಿರೂಪಿಸಿದರು.

Leave a Reply

comments

Related Articles

error: