ಸುದ್ದಿ ಸಂಕ್ಷಿಪ್ತ

ಜೂ. 23 ಮತ್ತು 24 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಮಡಿಕೇರಿ, ಜೂ.23: ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಜೂನ್, 23 ಮತ್ತು 24 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಚಿವರು ಜೂನ್, 23 ರಂದು ಬೆಳಗ್ಗೆ 11 ಗಂಟೆಗೆ ತಿತಿಮತಿಯ ಗ್ರಾಮ ಪಂಚಾಯಿತಿ ರಸ್ತೆ ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 11.15 ಗಂಟೆಗೆ ಗೋಣಿಕೊಪ್ಪ ಗ್ರಾ.ಪಂ.ರಸ್ತೆ ಉದ್ಘಾಟನೆ ನೆರವೇರಿಸಲಿದ್ದಾರೆ. 11.30 ಗಂಟೆಗೆ ಪೊನ್ನಂಪೇಟೆಯಲ್ಲಿ ಪರಿವೀಕ್ಷಣಾ ಮಂದಿರದ ಕಟ್ಟಡ ನಿರ್ಮಾಣ ಮತ್ತು ಪೀಠೋಪಕರಣ ಒದಗಿಸುವ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ವಿರಾಜಪೇಟೆ ಪಟ್ಟಣದ ಮಹಿಳಾ ಸಮಾಜದಲ್ಲಿ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‍ನಡಿ ಲೋಕೋಪಯೋಗಿ ಇಲಾಖೆಗೆ ಹಂಚಿಕೆ ಮಾಡಿರುವ 50 ಕೋಟಿ ರೂ. ಅನುದಾನದಲ್ಲಿ ವಿರಾಜಪೇಟೆ ವಿಭಾಗದ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಕಡಂಗ ಬೊಳ್ಳುಮಾಡು-ನಾಪೋಕ್ಲು-ಜಿಲ್ಲಾ ಮುಖ್ಯ ರಸ್ತೆ 14 ಕಿ.ಮೀ.ವರೆಗೆ 7 ಲಕ್ಷ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ, ಹಾಗೆಯೇ ಬಾವಲಿ-ಎಡಪಾಲ-ಕಡಂಗ ರಸ್ತೆ 7 ಕಿ.ಮೀ.ವರೆಗೆ 330 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಸಂಜೆ 4 ಗಂಟೆಗೆ ಚೆಯ್ಯಂಡಾಣೆ-ಚೇಲಾವರ ನೂತನ ರಸ್ತೆ ಉದ್ಘಾಟನೆ ಮಾಡಲಿದ್ದಾರೆ. 4.30 ಗಂಟೆಗೆ ಇಗ್ಗುತಪ್ಪ ದೇವಸ್ಥಾನ ನೂತನ ರಸ್ತೆ ಕಾಮಗಾರಿ ಪರಿಶೀಲನೆ ಮಾಡಲಿದ್ದಾರೆ.

ಜೂನ್, 24 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಐಟಿಡಿಪಿ ಇಲಾಖೆ ವತಿಯಿಂದ ಜೇನುಕುರುಬ ಜನಾಂಗದ ಫಲಾನುಭವಿಗಳಿಗೆ ಟಾಟಾ ಎಸಿ ಗೂಡ್ಸ್ ಆಟೋ ವಿತರಣೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿರುವ ಪ್ರಶಸ್ತಿ ಪ್ರಧಾನ, ಪರಿಕರ ವಿತರಣೆ, ಸಿಡಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12.15 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾನಿಗಳಿಂದ ನೀಡಿರುವ ‘ಎಲಿಜಾ ರೀಡರ್’ಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಗ್ರಂಥಾಲಯಕ್ಕೆ ದಾನಿಗಳು ನೀಡಿರುವ ಪುಸ್ತಕ ಮತ್ತು ಕಂಪ್ಯೂಟರ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಲೋಕೋಪಯೋಗಿ ಇಲಾಖೆಗೆ  ವಿಶೇಷ ಪ್ಯಾಕೇಜ್‍ನಡಿ ಹಂಚಿಕೆ ಮಾಡಿರುವ 50 ಕೋಟಿ ರೂ. ಅನುದಾನದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ವಿಭಾಗದ  ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀಡಿರುವ 5 ಕೋಟಿ ರೂ. ಮೊತ್ತದ ರಸ್ತೆ, ಚರಂಡಿ ಮತ್ತು ಪಾದಾಚಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಕುಶಾಲನಗರದಲ್ಲಿ ನೆರವೇರಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: