ದೇಶಪ್ರಮುಖ ಸುದ್ದಿ

ರಾಷ್ಟ್ರಪತಿ ಚುನಾವಣೆ : ಮೋದಿ, ಅಡ್ವಾಣಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ರಾಮ್‍ನಾಥ್ ಕೋವಿಂದ್

ನವದೆಹಲಿ, ಜೂ. 23 : ರಾಷ್ಟ್ರಪತಿ ಚುನಾಣೆಯಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್‍.ಕೆ.ಅಡ್ವಾಣಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಎನ್‍ಡಿಎ ಮೈತ್ರಿಪಕ್ಷಗಳ ಮುಖಂಡರು, ಕೋವಿಂದ್ ರನ್ನು ಬೆಂಬಲಿಸಿರುವ ಇತರ ಪಕ್ಷಗಳ ಮುಖ್ಯಸ್ಥರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಬಿಜೆಪಿಯ ಹಿರಿಯ ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಒಗ್ಗಟ್ಟು ಪ್ರದರ್ಶನ ಮಾಡಿದರು.

ನಿಯಮದಂತೆ ಒಟ್ಟು ನಾಲ್ಕು ಸೆಟ್ ನಾಮಪತ್ರಗಳನ್ನು ರಾಮನಾಥ್ ಕೋವಿಂದ್ ಅವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ಎನ್‍ಡಿಎ ಮೈತ್ರಿಕೂಟವು ರಾಷ್ಟ್ರಪತಿ ಚುನಾವಣೆಗೆ ರಾಮ್‍ನಾಥ್ ಕೋವಿಂದ್ ಅವರನ್ನು ಅಭ್ಯರ್ಥಿಯನ್ನಾಗಿ ಆರಿಸಿದೆ. ವಿಪಕ್ಷಗಳೂ ಸಹ ಗುರುವಾರ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವುದರಿಂದ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಅವಿರೋಧ ಆಯ್ಕೆ ಸಾಧ್ಯವಿಲ್ಲವಾಗಿದೆ.

ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಷಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವಾರು ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.

ವಿಪಕ್ಷಗಳ ಕಡೆಯಿಂದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಮೀರಾ ಕುಮಾರ್ ಕಣಕ್ಕಿಳಿಯಲಿದ್ದಾರೆ. ಆದರೆ ಈಗಾಗಲೇ ಎನ್‍ಡಿಎ ಅಭ್ಯರ್ಥಿ ಹಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು, ಮೀರಾ ಅವರು ಗೆಲುವು ಕಷ್ಟಕರ ಎನ್ನುವ ವಾತಾವರಣ ನಿರ್ಮಾಣವಾಗಿದೆ.

ಜೂನ್ 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜುಲೈ 17ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಎಲ್ಲ ಸಂಸದರು ಮತ್ತು ರಾಜ್ಯಗಳ ಶಾಸಕರು ಮತದಾನ ಮಾಡಲಿದ್ದಾರೆ. ಜೂನ್ 20ರ ಫಲಿತಾಂಶದೊಂದಿಗೆ ನೂತನ ರಾಷ್ಟ್ರಪತಿ ಯಾರು ಎಂಬುದು ಪ್ರಕಟವಾಗಲಿದೆ.

-ಎನ್.ಬಿ.

Leave a Reply

comments

Related Articles

error: